

ಮಂಡ್ಯ: ಬೆಂಗಳೂರಿನಲ್ಲಿ ನಡೆಯುವ ಕೃಷಿ ಮೇಳಕ್ಕೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದರೆ ಮಂಡ್ಯದಲ್ಲಿ ನಡೆಯುವ ಕೃಷಿ ಮೇಳಕ್ಕೆ ನಿಜವಾದ ರೈತರು ಹೆಚ್ಚಾಗಿ ಭಾಗವಹಿಸುವುದರಿಂದ ಬಹಳ ವಿಶಿಷ್ಟೃವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ವಿ.ಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಎರಡು ದಿನದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಮೇಳ ನೇರವಾಗಿ ಕೃಷಿಕರನ್ನು ತಲುಪುವುದು ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಸಾಧ್ಯ. ಜತೆಗೆ ಈ ಮೇಳ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೃಷಿ ಮೇಳದ ಆಚರಣೆಯ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾದ ಮಾಹಿತಿ ಒದಗಿಸಲಾಗುತ್ತದೆ. ನಮ್ಮ ವಿವಿಯಲ್ಲಿ ಕೃಷಿ ಚಟುವಟಿಕೆ ಮೇಲೆ ನಡೆಯುತ್ತಿರುವ ಸಂಶೋಧನಾ ಚಟುವಟಿಕೆ ಹಾಗೂ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯಲಾಗುತ್ತದೆ. ಜತೆಗೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬಿಡುಗಡೆಯಾದ ತಳಿಯ ಪರಿಚಯ ಮಾಡುವುದು ಮೇಳದ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಭತ್ತ, ರಾಗಿ, ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಯ ಹೊಸ ತಳಿಗಳನ್ನು ಕಂಡುಹಿಡಿಯುವಲ್ಲಿ ಸಾಕಷ್ಟು ಸಂಶೋಧನೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿದೆ. ಈ ರೀತಿಯ ಸಂಶೋಧನೆಗಳಲ್ಲಿ ರೈತರಿಗೆ ಹೆಚ್ಚು ಆಸಕ್ತಿ ಇದೆ. ಆದ್ದರಿಂದ ಕೃಷಿ ವಸ್ತು ಪ್ರದರ್ಶನದ ಜತೆಗೆ ಸಾಕಷ್ಟು ಬೆಳೆ ಪ್ರಾತ್ಯಕ್ಷಿಕೆ ಹಾಗೂ ಕೃಷಿಯಲ್ಲಿನ ನ್ಯೂನ್ಯತೆ ಸರಿಪಡಿಸುವ ಬಗೆಯನ್ನು ಮೇಳದಲ್ಲಿ ಆಯೋಜಿಸಲಾಗಿದೆ. ಭತ್ತದಲ್ಲಿನ ಬೆಂಕಿ ರೋಗ, ಕಬ್ಬು ಬೆಳೆಯಲ್ಲಿ ಕಂಡು ಬರುವ ರೋಗವನ್ನು ಹೋಗಲಾಡಿಸಲು ಅಗತ್ಯವಾಗಿ ಬಳಸಬೇಕಾದ ಸಸ್ಯ ಸಂರಕ್ಷಣಾ ಕ್ರಮವನ್ನು ರೈತರು ಅವಶ್ಯಕತೆ ತಿಳಿದುಕೊಳ್ಳಬೇಕು. ಇಂದಿನ ಪೀಳಿಗೆಯವರು ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಹೋಗುತ್ತಿರುವ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆ ಇದೆ. ಕೃಷಿ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರೈತರು ಕೃಷಿ ಯಂತ್ರೋಪಕರಣಗಳ ಮೇಲೆ ಅವಲಂಬನೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಸಚಿವರ ವಿಶೇಷ ಅಧಿಕಾರಿ ಎ.ಬಿ.ಪಾಟೀಲ್ ಮಾತನಾಡಿ, ಕೃಷಿ ಸಂಶೋಧನೆಯಲ್ಲಿ ರಾಷ್ಟ್ರ ಪ್ರಶಸ್ತಿಗೆ ಅರ್ಹವಾದ ಹೆಗ್ಗಳಿಕೆಗೆ ಪಾತ್ರವಾಗಿರುವುದು ಮಂಡ್ಯ ಜಿಲ್ಲೆ. ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಕೃಷಿಮೇಳ ಆಚರಿಸಲಾಗುತ್ತಿರುವುದು ಬಹಳ ಸಂತೋಷದ ವಿಷಯ. ಪ್ರತಿಯೊಬ್ಬರು ಸಮೃದ್ಧ ಜೀವನ ನಡೆಸಬೇಕಾದರೆ ಸೇವಿಸುವ ಆಹಾರ ಆರೋಗ್ಯಕರವಾಗಿರಬೇಕು. ಅಂತಹ ಆಹಾರವನ್ನು ಆರೋಗ್ಯವಾದ ಮಣ್ಣಿನಲ್ಲಿ ಮಾತ್ರ ಬೆಳೆಯಲು ಸಾಧ್ಯ. ಮಾನವನ ಹಾಗೂ ಮಣ್ಣಿನ ಆರೋಗ್ಯಕ್ಕೂ ನೇರ ಸಂಬಂಧವಿದೆ. ಮಣ್ಣು ಬರಡಾದರೆ ಕಣ್ಣು ಕುರುಡಾಯಿತು ಎಂಬ ಮಾತನ್ನು ನೆನೆಯುತ್ತ ಮಣ್ಣಿನ ಸಂರಕ್ಷಣೆ ಮಾಡುತ್ತಾ ಬಂದಲ್ಲಿ ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬಹುದು ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಡಾ.ಎಚ್.ಎಲ್.ಹರೀಶ್, ಡಾ.ಟಿ.ಕೆ.ಪ್ರಭಾಕರಶೆಟ್ಟಿ, ಎನ್.ದಿನೇಶ್, ಡಾ.ಎಂ ಚಂದ್ರೇಗೌಡ, ಬೆಂಗಳೂರು ಕೃಷಿ ವಿವಿ ಕುಲಸಚಿವ ಡಾ.ಕೆ.ಸಿ.ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು, ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ, ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯ ಡೀನ್(ಕೃಷಿ) ಡಾ.ಪಿ.ಎಸ್.ಫಾತಿಮಾ, ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಸಹ ವಿಸ್ತರಣಾಧಿಕಾರಿ ನಿರ್ದೇಶಕ ಡಾ.ಎ.ಡಿ.ರಂಗನಾರ್, ರಘುಪತಿ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಗಾಣದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಕುಳ್ಳೇಗೌಡ, ಡಾ.ಎನ್.ಶಿವಕುಮಾರ್, ಹೋರಾಟಗಾರ್ತಿ ಸುನಂದಾ ಜಯರಾಂ, ಬೋರೇಗೌಡ, ಕ್ಯಾತನಹಳ್ಳಿ ಶಂಕರ್, ಚಾಮರಾಜನಗರ ಕೃಷಿ ಕಾಲೇಜಿನ ಡೀನ್ ದೊರೆಸ್ವಾಮಿ, ಹಾಸನ ಕೃಷಿ ಕಾಲೇಜಿನ ಕಾಲೇಜಿನ ಡೀನ್ ಮುನಿಸ್ವಾಮಿಗೌಡ ಇತರರಿದ್ದರು.