

ತುಮಕೂರು/ತಿಪಟೂರು: ಜಿಲ್ಲೆಯಲ್ಲಿ ಭಾನುವಾರ ಎರಡು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಕೊಬ್ಬರಿ ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ತಿಪಟೂರಿನ ಲಾರಿ ಚಾಲಕ ಹಾಗೂ ಗುಜರಾತ್‌ನಿಂದ ಬಂದು ಪಾವಗಡದಲ್ಲಿ ಕ್ವಾರಂಟೈನ್‌ನಲ್ಲಿದ್ದ ವೈ.ಎನ್.ಹೊಸಕೋಟೆಯ ಮತ್ತೊಬ್ಬನಿಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ನಾಂದೇಡ್‌ನಿಂದ ಮೇ 19ರಂದು ತಿಪಟೂರಿಗೆ ಬಂದಿರುವ 50 ವರ್ಷದ ಟ್ರಕ್ ಚಾಲಕ (ಪಿ-1971)ನಿಗೆ ಸೋಂಕು ದೃಢಪಟ್ಟಿದೆ. ಗುಜರಾತ್‌ನ ಸೂರತ್‌ನಿಂದ ಮೇ 15ರಂದು ಪಾವಗಡಕ್ಕೆ ಆಗಮಿಸಿದ್ದ 13 ಜನರ ಪೈಕಿ ಮೂವರಿಗೆ ಈ ಹಿಂದೆಯೇ ಸೋಂಕು ದೃಢಪಟ್ಟಿತ್ತು. ಇದೀಗ 12 ದಿನದ ಮಾದರಿ ಪರೀಕ್ಷೆಯಲ್ಲಿ 22 ವರ್ಷದ (ಪಿ-1970) ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರಿಬ್ಬರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶನಿವಾರ ರಾತ್ರಿಯೇ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿಡಲು ಕ್ರಮವಹಿಸಲಾಗಿದೆ. ನಗರದ ಖಾದರ್ ನಗರದಲ್ಲಿ ಸೋಂಕಿತ (ಪಿ1688)ನ ಪ್ರಾಥಮಿಕ ಸಂಪರ್ಕ ಪಡೆದಿರುವ 5 ಜನರು ಹಾಗೂ ಹೆಬ್ಬೂರು ಹೋಬಳಿ ಮಾಯಮ್ಮನಪಾಳ್ಯದ ಸೋಂಕಿತ (ಪಿ1685)ನ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಮಾರ್ಗಸೂಚಿ ಮರೆತಿದ್ದರೇ ಚಾಲಕರು: ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದ ಕಾರಣಕ್ಕೆ ಮಹಾರಾಷ್ಟ್ರಕ್ಕೆ ಲಾರಿಗಳನ್ನು ಕಳುಹಿಸಲು ಜಿಲ್ಲಾಡಳಿತ ಒಪ್ಪಿತ್ತು. ಮಂಡಿ ಮಾಲೀಕರು ಹಾಗೂ ಲಾರಿ ಚಾಲಕರಿಗೆ ಸೋಂಕು ಹರಡದಂತೆ ಪಾಲಿಸಲು ಕೆಲವು ಮಾರ್ಗಸೂಚಿ ನೀಡಲಾಗಿತ್ತು. ಚಾಲಕರು ಹಣದಾಸೆಗೆ ಪ್ರಯಾಣಿಕರನ್ನು ಕೂರಿಸಿಕೊಂಡೋ ಅಥವಾ ಅಲ್ಲಿ ಮಾರ್ಗಸೂಚಿಗಳನ್ನು ಪಾಲಿಸದೆಯೋ ಸೋಂಕಿಗೆ ಸಿಲುಕಿದ್ದಾರೆ.
ತಿಪಟೂರಿನ ಗಾಂಧಿನಗರ ಕಂಟೇನ್ಮೆಂಟ್ ವಲಯ : ತಿಪಟೂರು ಗಾಂಧಿನಗರದ ಚಾಮುಂಡೇಶ್ವರಿ ಬಡಾವಣೆ ಕಂಟೇನ್ಮೆಂಟ್ ವಲಯ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂದಿನ 28 ದಿನ ಈ ಪ್ರದೇಶದಲ್ಲಿ ಜನರ ಸಂಚಾರಕ್ಕೆ ಅವಕಾಶವಿಲ್ಲ. ಉಪವಿಭಾಗಾಧಿಕಾರಿ ಕೆ.ಆರ್. ನಂದಿನಿ, ಡಿವೈಎಸ್‌ಪಿ ಎನ್.ಚಂದನ್‌ಕುಮಾರ್, ನಗರಾಯುಕ್ತ ಉಮಾಪತಿ ಶನಿವಾರ ರಾತ್ರಿಯೇ ಬಡಾವಣೆಗೆ ಭೇಟಿ ನೀಡಿ ಜನರಿಗೆ ಅಗತ್ಯವಸ್ತುಗಳು ತಲುಪುವ ವ್ಯವಸ್ಥೆ ಮಾಡಲು ಸೂಚಿಸಿದರು. ಚಾಮುಂಡೇಶ್ವರಿ ಬಡಾವಣೆಯಲ್ಲಿ ಒಟ್ಟು 315 ಮನೆಗಳಿದ್ದು, 1410 ಜನರಿದ್ದಾರೆ. ಕಂಟೇನ್ಮೆಂಟ್ ವಲಯದ 15 ಸ್ವಯಂ ಸೇವಕರು, ಅಧಿಕಾರಿಗಳು ಹಾಗೂ ಅಲ್ಲಿನ ಸ್ಥಳೀಯರ ನಡುವಿನ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ. ಜನರು ಇವರನ್ನು ಸಂಪರ್ಕಿಸಿ ಅಗತ್ಯ ವಸ್ತುಗಳನ್ನು ಪಡೆಯಬಹುದು.
ಇಡೀ ಕುಟುಂಬವೇ ಕ್ವಾರಂಟೈನ್: ತೆಂಗು ಬೆಳೆಗಾರರ ಹಿತಕಾಯಲು ಅನಿವಾರ್ಯವಾಗಿ ಎಪಿಎಂಸಿ ಕೊಬ್ಬರಿ ಮಾರುಕಟ್ಟೆ ಆರಂಭಿಸಿದೆ. ರೈತರಿಂದ ಕೊಂಡ ಕೊಬ್ಬರಿಗೆ ಮಹಾರಾಷ್ಟ್ರವೇ ಪ್ರಮುಖ ಮಾರುಕಟ್ಟೆಯಾಗಿದ್ದು ಚಾಲಕ ಕೂಡ ಅಲ್ಲಿಗೆ ಕೊಬ್ಬರಿ ಒಯ್ದು ಬಂದು ಸೋಂಕಿಗೆ ಸಿಲುಕಿದ್ದಾರೆ. ತಿಪಟೂರಿನ ಗಾಂಧಿನಗರ ನಿವಾಸಿ ಸೋಂಕಿತ ಮೇ 6ರಂದು ಮಹಾರಾಷ್ಟ್ರಕ್ಕೆ ಹೋಗಿದ್ದರು. 2ನೇ ಬಾರಿ ಮೇ 12ರಂದು ಹೋಗಿ 19ರಂದು ತಿಪಟೂರಿಗೆ ವಾಪಸಾಗಿ ಮನೆಯಲ್ಲಿದ್ದರು. ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ, ಅಳಿಯ, ಮಗಳು, ಮತ್ತು ಮಕ್ಕಳು ಸೇರಿ 6 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದೇ ಲಾರಿಯಲ್ಲಿ ಮಂಜುನಾಥನಗರದ ಕ್ಲಿನರ್, ಆತನ ಪತ್ನಿ ಮತ್ತು ತಾಯಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ಕೊನೆಹಳ್ಳಿ ಮುರಾರ್ಜಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದ್ದು, ಮುಂಬೈಗೆ ಕೊಬ್ಬರಿ ತೆಗೆದುಕೊಂಡು ಹೋಗಿ ವಾಪಸಾಗಿರುವ ಇನ್ನೂ ಸಾಕಷ್ಟು ಚಾಲಕರು, ಕ್ಲೀನರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.
ಮೈಮರೆತ ತಾಲೂಕು ಆಡಳಿತ: ಮಹಾರಾಷ್ಟ್ರಕ್ಕೆ ಹೋಗಿ ಬರುವ ಲಾರಿಗಳು ತಿಪಟೂರು ತಾಲೂಕು ಆಡಳಿತದ ವಶಕ್ಕೆ ಬರಬೇಕಿತ್ತು. ಆದರೆ, ಎಪಿಎಂಸಿ ರೂಪಿಸಿದ ಮಾರ್ಗಸೂಚಿಗಳನ್ನು ಮಂಡಿ ಮಾಲೀಕರು ಮರೆತರು, ತಾವು ಕಳುಹಿಸಿದ ಲಾರಿಗಳ ಮಾಹಿತಿ ಮುಚ್ಚಿಟ್ಟು ಕಳುಹಿಸಿದ್ದು ಅವಾಂತರಕ್ಕೆ ಕಾರಣವಾಗಿದೆ. ಈಗ ಸೋಂಕು ತಗುಲಿರುವ ಪಿ-1971 ಮೇ ಮೊದಲ ವಾರದಲ್ಲಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿರುವ ಮಾಹಿತಿ ತಾಲೂಕು ಆಡಳಿತದ ಬಳಿಯಿಲ್ಲ. ಲಾರಿ ಮಾಲೀಕನೇ ಸ್ವಯಂ ಪ್ರೇರಣೆಯಿಂದ ಮೇ 19ರಂದು ಚಾಲಕನ ಗಂಟಲು ದ್ರವದ ಪರೀಕ್ಷೆಗೆ ಕೊಟ್ಟು ಆತನನ್ನು ಮನೆಗೆ ಕಳುಹಿಸಿದ್ದಾರೆ. ಮೇ 23ರಂದು ಸೋಂಕು ದೃಢವಾದ ಬಗ್ಗೆ ವರದಿ ಬಂದ ನಂತರ ಚಾಲಕನಿಗಾಗಿ ತಾಲೂಕು ಆಡಳಿತ ಹುಡುಕಾಡಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದೆ.
ಸೋಂಕಿತನ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಮಾಯಮ್ಮನಪಾಳ್ಯದ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಭೇಟಿಯಾಗಿ ಧೈರ್ಯ ಹೇಳಿದರು. ಪಿಪಿಇ ಕಿಟ್ ಧರಿಸಿ ವಾರ್ಡ್‌ಗೆ ಹೋಗಿದ್ದ ಸುರೇಶ್‌ಗೌಡ, ನನ್ನ ಮತ ಕ್ಷೇತ್ರದ ಜನ ಕಷ್ಟದಲ್ಲಿದ್ದಾಗ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ನಾನು ಮಾಡಿದ್ದೇನೆ ಎಂದರು. ಆಸ್ಪತ್ರೆ ಪ್ರವೇಶಿಸುತ್ತಿರುವ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿರುವ ಸುರೇಶ್‌ಗೌಡ ಅಭಿಮಾನಿಗಳು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ
ಪಾವಗಡದಲ್ಲಿ ಕ್ವಾರಂಟೈನ್‌ನಲ್ಲಿದ್ದ ತಬ್ಲಿಗೆ ಕರೊನಾ ದೃಢ: ಗುಜರಾತ್‌ನಿಂದ ಬಂದಿದ್ದ ತಬ್ಲಿಗಳ ಪೈಕಿ ಮತ್ತೊಬ್ಬರಿಗೆ ಕರೊನಾ ಸೋಂಕು ಭಾನುವಾರ ದೃಢಪಟ್ಟಿದ್ದು, ಇದರಿಂದ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ವೈ.ಎನ್. ಹೊಸಕೋಟೆಯ 13 ಮತ್ತು ಆಂಧ್ರದ ಐವರು ತಬ್ಲಿಗಳು ಮೇ 5ರಂದು ಗುಜರಾತ್‌ನ ಅಹಮದಾಬಾದ್‌ನಿಂದ ಪಾವಗಡಕ್ಕೆ ಅಗಮಿಸಿದ್ದರು. ನಂತರ ಆಂಧ್ರದ 5 ತಬ್ಲಿಗಳನ್ನು ಅವರ ಊರಿಗೆ ಕಳುಹಿಸಲಾಗಿತ್ತು. ಉಳಿದ 13 ತಬ್ಲಿಗಳನ್ನು ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿಯ ಬಿಸಿಎಂ ಬಾಲಕಿಯರ ವಸತಿನಿಲಯದಲ್ಲಿ ಕ್ವಾರಂಟೈನ್‌ಲ್ಲಿರಿಸಲಾಗಿತ್ತು.ಮೇ 6ರಂದು 13 ಜನರ ಗಂಟಲು ದ್ರವ ವಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಮೂವರಿಗೆ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲಾ ಕರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ವಸತಿನಿಲಯದಲ್ಲಿ ತಬ್ಲಿಗಳ ಕ್ವಾರಂಟೈನ್‌ಗೆ ಕುರುಬರಹಳ್ಳಿ, ಬಾಲಮ್ಮನಹಳ್ಳಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 12 ದಿನಗಳ ನಂತರ ಎರಡನೇ ಸುತ್ತಿನಲ್ಲಿ ಮತ್ತೊಮ್ಮೆ10 ಜನರನ್ನು ಪರೀಕ್ಷೆಗೊಳಪಡಿಸಿದಾಗ 28 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ. ಶನಿವಾರ ರಾತ್ರಿ ಸೋಂಕು ದೃಢಪಟ್ಟ ಯುವಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 9 ತಬ್ಲಿಗಳ ಕ್ವಾರಂಟೈನ್ ಮುಂದುವರೆಸಲಾಗಿದೆ ಎಂದು ತಹಸೀಲ್ದಾರ್ ವರದರಾಜು ತಿಳಿಸಿದ್ದಾರೆ. ಸೋಂಕು ದೃಢಪಟ್ಟ ವಿಷಯವನ್ನು ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ.
ಕರೊನಾಗೆ ಮೂರನೇ ಬಲಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ಮಹಿಳೆ ಪಿ1686 ಭಾನುವಾರ ರಾತ್ರಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ. ನೆಲಮಂಗಲ ತಾಲೂಕು ದಾಬಸ್‌ಪೇಟೆ ಸಮೀಪದ ವೀರಸಾಗರದ ಮಹಿಳೆ ಎರಡು ವರ್ಷದಿಂದ ಖಿನ್ನತೆಗೆ ಒಳಗಾಗಿದ್ದರು. ಶ್ವಾಸಕೋಶ ಸಂಪೂರ್ಣ ಡ್ಯಾಮೇಜ್ ಆಗಿದ್ದ ಹಿನ್ನೆಲೆಯಲ್ಲಿ ಶನಿವಾರ ತುಮಕೂರು ಆಸ್ಪತ್ರೆಗೆ ದಾಖಲಾಗಿದ್ದಾಗ ಸೋಂಕು ದೃಢವಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ವಿಜಯವಾಣಿ’ಗೆ ತಿಳಿಸಿದರು.
ಹೊರ ರಾಜ್ಯಗಳಿಂದ ಬಂದವರ ಬಗ್ಗೆ ದಯಮಾಡಿ ಎಲ್ಲರೂ ಮಾಹಿತಿ ನೀಡಬೇಕು, ಸೋಂಕು ತಗುಲಿದರೂ ರೋಗ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಉದಾಸೀನ ಮಾಡದೆ ಮಾಹಿತಿ ನೀಡಬೇಕು. ಮಾಹಿತಿ ಮುಚ್ಚಿಟ್ಟರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಕೆ.ಆರ್.ನಂದಿನಿ ಉಪವಿಭಾಗಾಧಿಕಾರಿ, ತಿಪಟೂರು.