

ಆನೇಕಲ್: ಬಿಸಿಲ ಬೇಗೆ ಕಾರಣಕ್ಕೆ ನೀರಿನಲ್ಲಿ ಈಜಿ ಮೋಜಿಗೆ ಇಳಿದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ವರದಿ ಆಗುತ್ತಲೇ ಇರುತ್ತವೆ. ಇದೀಗ ಇನ್ನೇನು ಬೇಸಿಗೆ ಆರಂಭವಾಗುತ್ತಿದೆ ಎನ್ನುವಾಗಲೇ ಅಂಥದ್ದೇ ಒಂದು ಪ್ರಕರಣ ಸಂಭವಿಸಿದ್ದು, ಮಕ್ಕಳಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರಪ್ರದೇಶ ಮೂಲದ ನಿರ್ಮಲಾ (11) ಮತ್ತು ರೇಣುಕಾ (8) ಮೃತಪಟ್ಟವರು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಈ ದುರಂತ ಸಂಭವಿಸಿದೆ.
ಒಟ್ಟು ಐವರು ಮಕ್ಕಳು ಈ ಕಲ್ಲು ಕ್ವಾರಿಗೆ ಈಜಲು ತೆರಳಿದ್ದು, ಆ ಸಂದರ್ಭದಲ್ಲಿ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.