ಜಾನುವಾರು ಕಳ್ಳರಿಬ್ಬರ ಬಂಧನ

Two cattle thieves arrested
Published on

ಬಂಕಾಪುರ: ಜಾನುವಾರು ಕಳವು ಮಾಡಿ ಸಾಗಿಸುತ್ತಿದ್ದ ಇಬ್ಬರನ್ನು ಬಂಕಾಪುರ ಪೊಲೀಸರು ಬಂಧಿಸಿ, ಮೂರು ಎತ್ತುಗಳನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕವಾಸಪುರ ಗ್ರಾಮದ ದಾದಾಪೀರ ಕಡೆಮನಿ, ಅಬ್ದುಲ್​ಸತ್ತಾರ ಬಡಿಗಿ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಬೊಲೆರೋ ಪಿಕ್​ಆಪ್ ವಾಹನ, ಕಳವು ಮಾಡಿದ್ದ ಮೂರು ಎತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಸಮೀಪದ ತಾಲೂಕಿನ ಕಲ್ಯಾಣ ಗ್ರಾಮದಲ್ಲಿ ಶೆಡ್​ನಲ್ಲಿ ಕಟ್ಟಿದ್ದ ಎತ್ತು ಕಳ್ಳತನವಾದ ಬಗ್ಗೆ ಬಂಕಾಪುರ ಠಾಣೆಯಲ್ಲಿ ಫೆ. 22ರಂದು ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರು ಫೆ. 26ರಂದು ಬಾಡ ಗ್ರಾಮದ ಕನಕ ಅರಮನೆ ಹತ್ತಿರ ನೋಂದಣಿ ಸಂಖ್ಯೆ ಫಲಕ ಇಲ್ಲದ ವಾಹನದಲ್ಲಿ ಎತ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ವಾಹನ ತಡೆದು ಅದರಲ್ಲಿದ್ದವರನ್ನು ತನಿಖೆಗೆ ಒಳಪಡಿಸಿದಾಗ ಎತ್ತುಗಳನ್ನು ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಕಲ್ಯಾಣ ಗ್ರಾಮದಲ್ಲಿ ಕಳವು ಮಾಡಿದ್ದ ಒಂದು ಎತ್ತು ಮತ್ತು ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಕಳವು ಮಾಡಿದ್ದ ಎರಡು ಎತ್ತುಗಳನ್ನು ಕಳ್ಳರಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತಲೆಮರಿಸಿಕೊಂಡಿರುವ ಇನ್ನುಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಬಂಕಾಪುರ ಪಿಎಸ್​ಐ ನಿಂಗರಾಜ ಕರಕಣ್ಣನವರ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಪಿಐ ಸುರೇಶ ಕುಂಬಾರ, ಪಿಎಸ್​ಐ ನಿಂಗಪ್ಪ ಕರಕಣ್ಣವರ, ಎಸ್.ಎಂ. ವನಹಳ್ಳಿ, ಸಿಬ್ಬಂದಿ ವೆಂಕಟೇಶ ಲಮಾಣಿ, ಎ.ಕೆ. ನದಾಫ, ಗೋವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಜಬೀವುಲ್ಲಾ ದೊಡಮನಿ ಅವರ ಕಾರ್ಯಕ್ಕೆ ಎಸ್ಪಿ ಅಂಶುಕುಮಾರ ಶ್ರೀವತ್ಸ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net