ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

6skpp1-2 krushi honda
Published on

ಸಕಲೇಶಪುರ: ತಾಲೂಕಿನ ಹೊಸೂರು ಗ್ರಾಮದಲ್ಲಿ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸೋಮವಾರ ಮೃತಪಟ್ಟಿದ್ದಾರೆ.

ಪ್ರಣಯ್ (7), ನಿಶಾಂತ್ (4) ಮೃತ ಬಾಲಕರು. ತಾಲೂಕಿನ ಕೊಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೊಸೂರು ಗ್ರಾಮದ ಕೃಷ್ಣ ಹಾಗೂ ಪ್ರಶಾಂತ್ ಐಬಿಸಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದು ಎಸ್ಟೇಟ್‌ನಲ್ಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೃಷ್ಣ ಪುತ್ರ ಪ್ರಣಯ್ ಎರಡನೇ ತರಗತಿ ಓದುತ್ತಿದ್ದು ಪ್ರಶಾಂತ್ ಪುತ್ರ ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ.

ಸೋಮವಾರ ಬೆಳಗ್ಗೆ ಕೃಷ್ಣ ಹಾಗೂ ಪ್ರಶಾಂತ್ ದಂಪತಿ ಕಾಫಿ ಎಸ್ಟೇಟ್‌ಗೆ ಕೆಲಸಕ್ಕೆ ಹೋಗಿದ್ದರು. ಶಾಲೆ ಹಾಗೂ ಅಂಗನವಾಡಿಗೆ ರಜೆ ಇದ್ದುದ್ದರಿಂದ ಪ್ರಣಯ್ ಹಾಗೂ ನಿಶಾಂತ್ ಮನೆಯ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಲೇ ಕಾಫಿ ಎಸ್ಟೇಟ್‌ನಲ್ಲಿದ್ದ ಕೃಷಿ ಹೊಂಡದ ಬಳಿ ಕೈಯಲ್ಲಿ ಪ್ಲಾಸ್ಟಿಕ್ ಆಟಿಕೆಗಳನ್ನು ಹಿಡಿದು ತೆರಳಿದ್ದಾರೆ. ಪ್ರಣಯ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ರೈಲನ್ನು ಕೃಷಿ ಹೊಂಡಕ್ಕೆ ಎಸೆದಿದ್ದಾನೆ. ನಂತರ ಇಬ್ಬರು ಹೊಂಡದ ದಡದಲ್ಲಿ ಚಪ್ಪಲಿ ಬಿಟ್ಟು ರೈಲು ತರಲು ನೀರಿಗೆ ಇಳಿದಿದ್ದಾರೆ. ಕೃಷಿ ಹೊಂಡದಲ್ಲಿ ನೀರು ತುಂಬಿದ್ದರಿಂದ ಮೇಲೆ ಬರಲಾರದೆ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

ಬಾಲಕರು ಕಾಣದೆ ಇದ್ದಾಗ ಪಾಲಕರು ಎಲ್ಲೆಡೆ ಹುಡುಕಿದ್ದಾರೆ. ಕಾಫಿ ಎಸ್ಟೇಟ್‌ನಲ್ಲಿದ್ದ ಕೃಷಿ ಹೊಂಡದ ಬಳಿ ದಡದಲ್ಲಿ ಮಕ್ಕಳ ಚಪ್ಪಲಿಗಳು ಕಂಡಿವೆ. ಹೊಂಡಕ್ಕೆ ಇಳಿದು ಶೋಧಕಾರ್ಯ ನಡೆಸಿದಾಗ ಇಬ್ಬರು ಮಕ್ಕಳ ಶವಗಳು ದೊರೆತಿವೆ. ಎರಡು ಶವಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಿದರು. ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಯಿತು. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net