

ಮಂಡ್ಯ: ಸಾಹಿತ್ಯದಲ್ಲಿ ಆಳವಾದ ಚಿಂತನೆಗಳು ಇರುತ್ತವೆ ಎಂದು ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘ, ಪರಿಚಯ ಪ್ರಕಾಶನ ಮತ್ತು ಐಡಿಯಲ್ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಶುಭಶ್ರೀ ಪ್ರಸಾದ್ ಅವರ ಎರಡು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಮತ್ತು ಕುವೆಂಪು ಸೇರಿದಂತೆ ಹಲವು ಮಹನೀಯ ಸಾಹಿತಿಗಳನ್ನು ನೋಡಿದ್ದೇವೆ ಹಾಗೂ ಅವರನ್ನು ಮೆಚ್ಚಿಕೊಂಡಿದ್ದೇವೆ. ಶುಭಶ್ರೀ ಅವರು ಪುಸ್ತಕ ರಚನೆಯಲ್ಲಿ ಆಕೆ ಕನ್ನಡಿ ನೋಡಿದ ಹಾಗೆ ಸಾಹಿತ್ಯ ಭಾಷೆಯ ಕಣ್ಣಿನಲ್ಲಿ ತಿಳಿಸಿಕೊಟ್ಟಿದ್ದಾರೆ. ಅಂದರೆ ಒಳನೋಟ, ಹೊರಕಣ್ಣುಗಳೆಲ್ಲವೂ ನೋಟಗಳ ರೂಪದಲ್ಲಿ ಅಡಗಿಸಿಟ್ಟುಕೊಂಡಿರುವ ಕೃತಿಗಳಾಗಿವೆ ಎಂದರೆ ಅತಿಶಯೋಕ್ತಿಯಲ್ಲ ಎಂದು ವಿವರಿಸಿದರು.
ಶುಭಶ್ರೀ ಅವರ ಅನಿಸಿಕೆಗಳನ್ನು ನಿಮ್ಮಲ್ಲರಿಗೂ ಅಂದರೆ ಓದುಗರು ಅಪ್ಪಿಕೊಳ್ಳುವಂತಹ ತೆರೆದ ನೋಟ ಮತ್ತು ಹೊತ್ತಗೆ ಹಿಡಿವ ಹೊತ್ತು ಕೃತಿ ಬರೆದಿದ್ದಾರೆ. ಈ ಕೃತಿಗಳು ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಲಾಗಿದೆ. ಇವರ ಅಕ್ಷರ ಅಕ್ಷರ ಸ್ಪರ್ಶ ಮತ್ತು ಹೃದಯದ ಭಾವಪೂರ್ಣತೆಯ ಕೃತಿಗಳಾಗಿವೆ. ಪಶ್ಚಿಮ ಬಂಗಾಳದಲ್ಲಿ ತೆಗೆದು ಚಿತ್ರಪಟವನ್ನು ಮುಖವಾಣಿಯಲ್ಲಿ ಬಳಸಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಕೃತಿ ಕುರಿತು ಮಾತನಾಡಿದ ಪರಿಚಯ ಪ್ರಕಾಶನದ ಪ್ರಕಾಶಕ ಶಿವಕುಮಾರ್ ಆರಾಧ್ಯ, ಪ್ರಸ್ತುತದಲ್ಲಿ ಓದುವ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಒಂದಷ್ಟು ವಿದ್ಯಾರ್ಥಿಗಳಿಗೆ ಪುಸ್ತಕವನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಓದುವ ಅಭಿರುಚಿಯನ್ನು ಬೆಳೆಸಬೇಕು. 13 ಕೃತಿಗಳನ್ನೊಳಗೊಂಡ ಸಮಗ್ರವಾಗಿ ಓದುಗರಿಗೆ ಪುಸ್ತಕದಲ್ಲಿ ಹೇಳಲಾಗಿದೆ. ಎಲ್ಲವನ್ನೂ ಹೇಳಬೇಕೆನ್ನುವ ತುಡಿತ ಲೇಖಕರಿಗೆ ಇರುತ್ತದೆ. ಅದೆಲ್ಲವನ್ನೂ ಅರಿತು ನಾನೊಬ್ಬ ಓದುಗರಿಗೆ ಏನು ಹೇಳಬೇಕು ಎನ್ನುವ ಮಿತಿಯೊಳಗೆ ಪುಸ್ತಕ ರೂಪದಲ್ಲಿ ಪ್ರೀತಿ ಮತ್ತು ಆಪ್ತತೆ ತೆರೆದುಕೊಂಡಿದೆ ಎಂದು ವಿಶ್ಲೇಷಿಸಿದರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯಾಧಿಕಾರಿ ಬಿ.ಆರ್.ರವೀಂದ್ರ ಇದ್ದರು. ಇದೇ ವೇಳೆ ಶುಭಶ್ರೀ ಅವರ ’ತೆರೆದ ನೋಟ’ ಹಾಗೂ ’ಹೊತ್ತಗೆ ಹಿಡಿವ ಹೊತ್ತು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.