

ಬೆಳಗಾವಿ: ಜಿಲ್ಲೆಯ ಯರಗಟ್ಟಿ ಪಟ್ಟಣ,ಸುತ್ತಮುತ್ತಲ ಗ್ರಾಮಗಳಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರಗೋಡ ಠಾಣೆ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿ ,6 ಬೈಕ್ ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಕಂಡಿ ಬಿ.ಕೆ. ಗ್ರಾಮದ ರಾಘವೇಂದ್ರ ಕಾತರಕಿ (30), ಬಸವರಾಜ ಸಾಲಮಂಟಪಿ (32) ಬಂಧಿತರು.
ಯರಗಟ್ಟಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಮನೆ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿದ ಬೈಕ್ ಕಳ್ಳತನವಾಗಿರುವ ಕುರಿತು ಮಾಲೀಕರು ಆ.8ರಂದು ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ಅಮರನಾಥ ರೆಡ್ಡಿ , ರಾಮದುರ್ಗ ಡಿಎಸ್‌ಪಿ ಎಸ್.ಎ.ಪಾಟೀಲ ಮಾರ್ಗದರ್ಶನದಲ್ಲಿ ಮುರಗೋಡ ಪಿಎಸ್‌ಐ ಪ್ರವೀಣ ಗಂಗೋಳ ನೇತೃತ್ವದ ತನಿಖಾ ತಂಡ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾದ ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಎಸ್.ಆರ್.ನ್ಯಾಮಗೌಡ್ರ, ವಿ.ಡಿ.ಸಕ್ರಿ, ಎಸ್.ಎಸ್.ದೇಯಣ್ಣವರ, ಎಸ್.ಬಿ.ದೊಡ್ಡವಾಡ ಕಾರ್ಯಾಚರಣೆಯಲ್ಲಿದ್ದರು.