

ವಿಜಯವಾಣಿ ಸುದ್ದಿಜಾಲ ಈಶ್ವರಮಂಗಲ
ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಲ್ನಾಡು ಉಜಿರುಪಾದೆ ಸಮೀಪ ಬಬ್ಬಲಿಯಲ್ಲಿರುವ ಬೆಂಗಳೂರಿನ ಲೆಕ್ಕ ಪರಿಶೋಧಕ ಶಿವಪ್ರಸಾದ್ ಭಟ್ ಮನೆಯಿಂದ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಯಾನೆ ಮನ್ಸೂರ್ ಯಾನೆ ಕಳ್ಳ ಅಶ್ರಫ್(42) ಮತ್ತು ಸಾಲ್ಮರ ಸಮೀಪದ ಗುಂಪಕಲ್ಲು ಸೈಯದ್ ಮಲೆ ನಿವಾಸಿ ಕೆ.ಮೊಹಮ್ಮದ್ ಸಲಾಂ ಬಂಧಿತರು.
ಕಳೆದ ಫೆ.22ರಂದು ಶಿವಪ್ರಸಾದ್ ಭಟ್ ಅವರು ಚಿನ್ನಾಭರಣಗಳನ್ನು ಮನೆಯ ಕೋಣೆಯ ಕಪಾಟಿನ ಲಾಕರ್‌ನಲ್ಲಿ ಇರಿಸಿ, ಜಮೀನಿನ ಉಸ್ತುವಾರಿಯನ್ನು ಬಾಲಸುಬ್ರಹ್ಮಣ್ಯ ಭಟ್ ಎಂಬುವರಿಗೆ ವಹಿಸಿಕೊಟ್ಟು ತಾಯಿ ಜತೆ ಬೆಂಗಳೂರಿಗೆ ತೆರಳಿದ್ದರು. ಇದನ್ನರಿತ ಆರೋಪಿಗಳು ಮನೆ ಬೀಗ ಮುರಿದು ಲಾಕರ್‌ನಲ್ಲಿದ್ದ 160 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಘಟನೆ ಬಗ್ಗೆ ಫೆ.26ರಂದು ಬಾಲಸುಬ್ರಹ್ಮಣ್ಯ ಅವರು ಶಿವಪ್ರಸಾದ್ ಭಟ್‌ಗೆ ಮಾಹಿತಿ ನೀಡಿದ್ದರು. ಬಳಿಕ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ: ಪ್ರಕರಣ ಬೇಧಿಸುವ ನಿಟ್ಟಿನಲ್ಲಿ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ನೇತೃತ್ವದಲ್ಲಿ, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಗೆ, ಸಂಪ್ಯ ಠಾಣಾ ಎಸ್‌ಐಗಳಾದ ಉದಯರವಿ ಎಂ.ವೈ ಮತ್ತು ಅಮೀನ್ ಸಾಬ್ ಅತ್ತಾರ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕಳವು ನಡೆದ ತಿಂಗಳ ಒಳಗಾಗಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಹಲವಾರು ಪ್ರಕರಣ: ವಿಚಾರಣೆ ವೇಳೆ ವಿಟ್ಲ ಠಾಣಾ ವ್ಯಾಪ್ತಿಯ ಅಜ್ಜನಡ್ಕ ಮಹಮ್ಮದ್ ಅಲಿ ಎಂಬುವರ ಮನೆಗೆ ನುಗ್ಗಿ ಕಳ್ಳತನ, ಬಲ್ನಾಡು ವಿಷ್ಣು ಮೂರ್ತಿ ದೈವಸ್ಥಾನದಲ್ಲಿ ದೈವಗಳ ಬೆಳ್ಳಿ ಆಯುಧ- ಆಭರಣಗಳ ಕಳವು, ಇರ್ದೆ ಶ್ರೀವಿಷ್ಣು ಮೂರ್ತಿ ದೇವಸ್ಥಾನ, ಮಾಡ್ನೂರು ಗ್ರಾಮದ ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ಠಾಣಾ ವ್ಯಾಪ್ತಿಯ ಮನೆ ಹಾಗೂ ಕಾಸರಗೋಡು ಆದೂರು ಠಾಣಾ ವ್ಯಾಪ್ತಿಯ ಎರಡು ಮನೆಗಳಿಂದ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಿಂದ ರೂ.6.5ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್‌ಟಾಪ್, ಸಿಸಿ ಕ್ಯಾಮರಾ ಡಿವಿಆರ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಶೇಷ ಪೊಲೀಸ್ ತಂಡದಲ್ಲಿ ಎಎಸ್‌ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಧರ್ಮಪಾಲ್, ಅದ್ರಾಮ್, ಪ್ರವೀಣ್ ರೈ ಪಾಲ್ತಾಡಿ, ಜಗದೀಶ್ ಅತ್ತಾಜೆ, ಹರ್ಷಿತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್ ಹಾಗೂ ಮಹಿಳಾ ಪೊಲೀಸ್ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ಪಾಲ್ಗೊಂಡಿದ್ದರು. ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್‌ಪಿ ಋಷಿಕೇಶ್ ಸೋನಾವಣೆ ಬಹುಮಾನ ಘೋಷಿಸಿದ್ದಾರೆ.