

ಹೊಳೆನರಸೀಪುರ: ಅಕ್ರಮವಾಗಿ ಕಾರಿನಲ್ಲಿ 25 ಕೆಜಿಯಷ್ಟು ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಈಡಿಗರ ಬೀದಿಯ ಸಂತೋಷ್ ಮತ್ತು ಸೈಯದ್ ಶಾಬಾಜ್ ಬಂಧಿತರು. ಪಟ್ಟಣದ ಅರಕಲಗೂಡು ರಸ್ತೆಯಿಂದ ಕಡುವಿನ ಕೋಟೆ ಗ್ರಾಮಕ್ಕೆ ತೆರಳುವ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿಯ ಮಣ್ಣಿನ ರಸ್ತೆ ಸಮೀಪ ಇಬ್ಬರು ಅಪರಿಚಿತರು ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ತಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಠಾಣೆ ಪೊಲೀಸರು, ಮರೆಯಲ್ಲಿ ನಿಂತು ಗಮನಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಪೊಲೀಸ್ ಸಿಬ್ಬಂದಿ ನೋಡಿ ಗಾಬರಿಗೊಂಡು ಓಡಿಹೋಗಿ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಕಾರನ್ನು ಸುತ್ತುವರೆದು ದಿಢೀರನೆ ದಾಳಿ ನಡೆಸಿ ಕೆಎ 41 ಬಿ 5928 ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭ ಲಗೇಜ್ ಬ್ಯಾಗಿನಲ್ಲಿ ಅಡಗಿಸಿಟ್ಟಿದ್ದ 25 ಕೆಜಿ ತೂಗುವ ಮೂರು ಚೀಲಗಳು ಕಂಡು ಬಂದಿದೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮಾಹಿತಿ ಲಭ್ಯವಾಗಿದೆ. ಕೆ.ಆರ್.ಪೇಟೆ, ಕೆ.ಆರ್.ನಗರ ಮತ್ತು ಹಾಸನದ ವಿವಿಧ ಭಾಗಗಳಲ್ಲಿ ಗಾಂಜಾ ಸರಬರಾಜು ಮಾಡಲು ತಂದಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.