ಹನೂರು: ತಾಲೂಕಿನ ರಾಮಾಪುರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಜೆ ಮಾರಾಟ ಮಾಡುವ ಉದ್ದೇಶದಿಂದ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಗಂಗನದೊಡ್ಡಿ ಗ್ರಾಮದ ಚಿನ್ನಣ್ಣ (49) ಹಾಗೂ ಇದೇ ಗ್ರಾಮದ ಚೆನ್ನಯ್ಯ (48) ಬಂಧಿತರು. ಈ ಇಬ್ಬರೂ ಸಂಜೆ 5ರ ವೇಳೆಯಲ್ಲಿ ಗ್ರಾಮದಿಂದ ರಾಮಾಪುರದ ಹೊರವಲಯದಲ್ಲಿನ ಜಲಾಶಯದ ಕಾಲುವೆಯ ರಸ್ತೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ದಿನ್ನಳ್ಳಿ ಕಡೆಗೆ ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಅವರು ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. ಬಳಿಕ 7 ಕೆ.ಜೆ 100 ಗ್ರಾಂ ಬೀಜ ಮಿಶ್ರಿತ ಒಣ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.