

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಗೂ ಅಪಹಾಸ್ಯ ಮಾಡುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಜಗದೇವ್ (೨೮) ಮತ್ತು ಚಂದನ್ ಕುಮಾರ್ (೩೦) ಬಂಧಿತರು. ಆರೋಪಿಗಳು ನ.೧೬ರಂದು ಲಕ್ಷ್ಮಣ್ ಮಾಂಜಿ (೨೨) ಎಂಬಾತನನ್ನು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಲಕ್ಷ್ಮ ಣ್ ಮಾಂಜಿ ಮತ್ತು ಆರೋಪಿಗಳು ಜಾರ್ಖಂಡ್ನ ಒಂದೇ ಊರಿನವರಾಗಿದ್ದಾರೆ. ಭೈರತಿ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಶೆಡ್ನಲ್ಲಿ ವಾಸವಾಗಿದ್ದರು. ಈ ಮಧ್ಯೆ ಲಕ್ಷ್ಮಣ್ ಮತ್ತು ಆರೋಪಿಗಳ ನಡುವೆ ಜಾರ್ಖಂಡ್ನ ಸ್ವಂತ ಊರಿನಲ್ಲಿ ವೈಯಕ್ತಿಕ ವಿಚಾರಕ್ಕೆ ಗಲಾಟೆಯಾಗಿತ್ತು. ಅಂದಿನಿಂದ ಲಕ್ಷ್ಮಣ್ ಮೇಲೆ ದ್ವೇಷ ಸಾಧಿಸುತ್ತಿದ್ದರು. ಇನ್ನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗಲೂ ಸಣ್ಣ-ಪುಟ್ಟ ವಿಚಾರಕ್ಕೆ ಬೇಕಂತಲೇ ಆರೋಪಿಗಳಿಗೆ ಲಕ್ಷ್ಮಣ್ ರೇಗಿಸುತ್ತಿದ್ದ. ಅದರಿಂದ ಮೂವರ ನಡುವೆ ಜಗಳ ನಡೆಯುತ್ತಿತ್ತು. ನ.೧೬ರಂದು ರಾತ್ರಿ ಮೂವರು ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಆಗಲೂ ಲಕ್ಷ್ಮಣ್, ಆರೋಪಿಗಳಿಗೆ ಉದ್ದೇಶಪೂರ್ವಕವಾಗಿಯೇ ಕಿಚಾಯಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿಗಳು, ಲಕ್ಷ್ಮಣ್ನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದು, ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ರೈಲಿನಲ್ಲಿ ಜಾರ್ಖಂಡ್ಗೆ ಪರಾರಿಯಾಗಲು ಸಿದ್ದತೆ ನಡೆಸಿದ್ದರು. ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಅಶ್ವತ್ಥ ನಾರಾಯಣಸ್ವಾಮಿ ಮತ್ತು ತಂಡ, ಮೃತದೇಹ ಗುರುತು ಪತ್ತೆ ಹಚ್ಚಿದ್ದರು. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.