

ಮೈಸೂರು: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 8,50,000 ರೂ. ಮೌಲ್ಯದ 56 ಕೆ.ಜಿ.730 ಗ್ರಾಂ. ತೂಕದ ಶ್ರೀಗಂಧದ ತುಂಡುಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ನಗರದ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಇತ್ತೀಚೆಗೆ ಸ್ವತ್ತಿನ ಅಪರಾಧಗಳ ಪತ್ತೆ ಬಗ್ಗೆ ವಿಜಯನಗರ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದರು. ಈ ವೇಳೆ ಬಂದ ಖಚಿತ ಮಾಹಿತಿಯ ಮೇರೆಗೆ ವಿಜಯನಗರದ 4ನೇ ಹಂತದಲ್ಲಿರುವ ವಿಜಯನಗರ ಬಾರ್ ಬಳಿ ಒಂದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.