ಕಾಡು ಪ್ರಾಣಿಗಳ ಶಿಕಾರಿ ಮಾಡಿದ್ದ ಇಬ್ಬರ ಬಂಧನ

Hunter of wild animals
ಉಂಬ್ಳೆಬೈಲ್ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಶಿಕಾರಿ ಮಾಡಿದ್ದ ಇಬ್ಬರನ್ನು ಬಂಧಿಸಲಾಯಿತು.
Published on

ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲ್ ಬಳಿಯ ಕೈದೊಟ್ಲು ಬಳಿ ಜಿಂಕೆ, ಬರ್ಕ ಮತ್ತು ಕಾಡು ಮೊಲ ಶಿಕಾರಿ ಮಾಡಿದ್ದ ಇಬ್ಬರನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ.

ಎನ್.ಆರ್.ಪುರ ತಾಲೂಕಿನ ಚಬ್ಬೆನಾಡು ಗ್ರಾಮದ ಭರತ್ (30) ಮತ್ತು ಹೊನ್ನೆಕೊಪ್ಪದ ಸುನೀಲ್ (33) ಬಂಧಿತರು. ಈಶ್ವರ್, ನವೀನ್ ಮತ್ತು ಸುಜಿತ್ ಎಂಬುವರು ತಲೆಮರೆಸಿಕೊಂಡಿದ್ದಾರೆ.
ಉಂಬ್ಳೆಬೈಲ್ ವ್ಯಾಪ್ತಿಯ ಅರಣ್ಯದಲ್ಲಿ ಜಿಂಕೆ, ಬರ್ಕ ಮತ್ತು ಕಾಡುಮೊಲವನ್ನು ಶಿಕಾರಿ ಮಾಡಿ ಪಾರ್ಟಿ ಮಾಡಲು ಸಜ್ಜಾಗಿದ್ದರು. ಮಾರುತಿ ಕಾರು ಮತ್ತು ಓಮ್ನಿಯಲ್ಲಿ ಶಿಕಾರಿ ಮಾಡಿದ ಪ್ರಾಣಿಗಳನ್ನು ಸಾಗಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೈದೋಟ್ಲು ಬಳಿ ಭಾನುವಾರ ರಾತ್ರಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ಳೆಬೈಲ್ ಆರ್‌ಎಫ್‌ಒ ವೈ.ಪಿ.ತೇಜ್, ಡಿವೈಆರ್‌ಎಫ್‌ಒ ಗಿಡ್ಡಸ್ವಾಮಿ, ಡಿವೈಆರ್‌ಎಫ್‌ಒ ಅಬ್ದುಲ್ ಮಜೀದ್, ಗಸ್ತು ವನಪಾಲಕ ಶ್ರೀಕಾಂತ್, ರಂಗೇಗೌಡ, ದಿನೇಶ್ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net