ಗುತ್ತಿಗೆದಾರನಿಗೆ 2.57 ಕೋಟಿ ರೂ. ಬ್ಲಾೃಕ್‌ಮೇಲ್ ಇಬ್ಬರ ಬಂಧನ

ನಿಜಾಮ್ ಅಲಿಯಾಸ್ ಇಬ್ರಾಹಿಂ
ನಿಜಾಮ್ ಅಲಿಯಾಸ್ ಇಬ್ರಾಹಿಂ
Published on
ಮಂಗಳೂರು: ಅಶ್ಲೀಲ ವೀಡಿಯೋ ಮತ್ತು ಫೋಟೋಗಳಿವೆ ಎಂದು ಗುತ್ತಿಗೆದಾರರೊಬ್ಬರಿಗೆ ಬ್ಲಾೃಕ್‌ಮೇಲ್ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಹಿತ ಇಬ್ಬರನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಂಚನೆಗೊಳಗಾದ ಗುತ್ತಿಗೆದಾರನ ಜತೆಗೆ ಕೆಲಸ ಮಾಡುತ್ತಿದ್ದ ಜಿತೇಶ್ ಮತ್ತು ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳು. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಜಿತೇಶ್ ಜತೆ ಗುತ್ತಿಗೆದಾರ ಆಪ್ತವಾಗಿರುವ ವಿಡಿಯೋ ಮಾಡಿ ಆರಂಭದಲ್ಲಿ ಜಿತೇಶ್ ಮಾತ್ರ ಬ್ಲಾೃಕ್ ಮೇಲ್ ಮಾಡುತ್ತಿದ್ದ. ಈತ ಗುತ್ತಿಗೆದಾರನಿಂದ 35 ಲಕ್ಷ ರೂ. ಚೆಕ್ ಮೂಲಕ ಪಡೆದಿದ್ದ. ಮರ್ಯಾದೆಗೆ ಅಂಜಿ ಈ ವಿಚಾರವನ್ನು ಸರಿ ಮಾಡಿಕೊಡುವಂತೆ ನಿಜಾಮ್ ಜತೆ ಗುತ್ತಿಗೆದಾರ ಹೇಳಿದ್ದು, ಆದರೆ ನಿಜಾಮ್ ಕೂಡಾ ಜಿತೇಶ್ ಜತೆ ಸೇರಿ ಬ್ಲಾೃಕ್‌ಮೇಲ್ ಮಾಡತೊಡಗಿದ್ದ. ಜಿತೇಶ್ ಘಟನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರಿದೆ, ಕೋರ್ಟ್ ಕಚೇರಿ ಎಂದು ಹೋದರೆ ಜೈಲಿಗೆ ಹೋಗುವುದು ಖಚಿತ ಎಂದು ಬೆದರಿಸಿ ಸುಳ್ಳು ಕಥೆ ಕಟ್ಟಿ ಬ್ಲಾೃಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಇಬ್ಬರೂ ಸೇರಿ 2024ರಿಂದ 2026ರ ತನಕ ಹಂತ ಹಂತವಾಗಿ ಬರೋಬ್ಬರಿ 2.57 ಕೋಟಿ ರೂ. ವನ್ನು ವಸೂಲಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಜಿತೇಶ್ ಏಕಾಏಕಿ ಗುತ್ತಿಗೆದಾರನಿಗೆ ನಗರದಲ್ಲಿ ಕಾಣಲು ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಜೀವಂತ ಇರುವುದನ್ನು ಕಂಡು ವಂಚನೆಗೊಳಗಾಗಿರುವುದು ಅರಿವಾಗಿದೆ. ಬಳಿಕ ಪೊಲೀಸ್ ದೂರು ದಾಖಲಾಗಿದೆ.

ಪ್ರಕರಣದ ಹಿಂದೆ ಈ ಇಬ್ಬರು ಆರೋಪಿಗಳು ಮಾತ್ರ ಇದ್ದರಾ ಅಥವಾ ಬೇರೆ ಯಾರಿಗಾದರೂ ಪಾಲು ಹೋಗಿದೆಯೇ ಎನ್ನುವುದು ಪೊಲೀಸ್ ತನಿಖೆಯ ಬಳಿಕಷ್ಟೇ ತಿಳಿದು ಬರಬೇಕಾಗಿದೆ.

ಆರೋಪಿ ನಿಜಾಮ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹಿತ ಪಕ್ಷದ ವಿವಿಧ ಮುಖಂಡರು ಹಾಗೂ ಅಧಿಕಾರಿಗಳು, ಗಣ್ಯರ ಜತೆ ನಿಂತು ಭಾವಚಿತ್ರ ತೆಗೆಸಿಕೊಂಡಿದ್ದು, ಈ ಎಲ್ಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಕ್ಷದಿಂದ ಉಚ್ಛಾಟನೆ
ನಿಜಾಮ್ ಮೇಲೆ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೆ ಕೊಂಡಿರುವ ಆರೋಪ ಬಂದಿರುವುದು ಪಕ್ಷದ ಶಿಸ್ತು ಹಾಗೂ ಗೌರವಕ್ಕೆ ಧಕ್ಕೆ ಉಂಟುಮಾಡಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿತಾಸಕ್ತಿ ಮತ್ತು ಶಿಸ್ತು ಕಾಪಾಡುವ ದೃಷ್ಟಿಯಿಂದ ನಿಜಾಮ್ ನನ್ನು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಯುವ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಧ್ಯಕ್ಷ ಇಬ್ರಾಹಿಂ ನವಾಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net