

ಮಂಡ್ಯ: ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಮೇ 18ರಂದು ನಡೆಯಲಿರುವ ಏಳನೇ ಅಂತಾರಾಷ್ಟ್ರೀಯ ಥಾಯ್ ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ಮಂಡ್ಯದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಒಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮುಖ್ಯ ಬೋಧಕ ಡಾ.ಎಸ್.ಕೃಷ್ಣಮೂರ್ತಿ ತಿಳಿಸಿದರು.
ಈ ಪಂದ್ಯಾವಳಿಗೆ ದೇಶದಿಂದ 21 ಜನ ಭಾಗವಹಿಸಲಿದ್ದಾರೆ. ಅಂತೆಯೇ ರಾಜ್ಯದಿಂದ ಮಂಡ್ಯ ಮತ್ತು ಮೈಸೂರು ಜಿಲ್ಲೆಯ 6 ಕರಾಟೆ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯದಿಂದ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್‌ನಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಪಡೆದ, ಟೊರ್ನಾಡೊ ಕಿಕ್ಸ್‌ನಲ್ಲಿ 66 ಕಿಕ್ ಮಾಡುವ ಮೂಲಕ 2022ರಲ್ಲಿ ನೊಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದ ಹಾಗೂ ಸಂಸ್ಥೆಯಲ್ಲಿ ತರಬೇತಿ ಪಡೆದು, ತರಬೇತುದಾರನಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ 24 ವರ್ಷದ ಆರ್.ಶಶಾಂಕ್ ಹಾಗೂ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗಳಿಸಿದ, 2023ರಲ್ಲಿ ಸೈಡ್ ಸಿಟಪ್ ಮತ್ತು ಸ್ಟ್ರೆಚ್‌ನಲ್ಲಿ ನೊಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದ ಹಾಗೂ ಶ್ರೀ ಚೈತನ್ಯ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಸೈಯದ್ ಸರ್ಫರಾಜ್ ಅಕ್ಬರ್ ಪ್ರತಿನಿಧಿಸಲಿದ್ದಾರೆ ಎಂದು ವಿವರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್, ಆರ್.ಚಂದ್ರು, ಆರ್.ಶಶಾಂಕ್, ಸೈಯದ್ ಸರ್ಫರಾಜ್ ಅಕ್ಬರ್ ಇದ್ದರು.