

ಹರಿಹರ: ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಆದೇಶದಂತೆ ನಗರದ ದೊಡ್ಡಿಬೀದಿಯ ಸಾರ್ವಜನಿಕ ಆಸ್ಪತ್ರೆ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದರು ಎನ್ನಲಾದ ವಾಣಿಜ್ಯ ಮಳಿಗೆಗಳನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡರು.
ಮಂಗಳವಾರ ದೊಡ್ಡಿಬೀದಿಯ ಗರಡಿಮನೆಯ ಅಕ್ಕಪಕ್ಕದಲ್ಲಿ ನಿರ್ಮಿಸಿದ್ದ 11 ಮಳಿಗೆಗಳಿಗೆ ಅಧಿಕಾರಿಗಳ ತಂಡ ಬೀಗ ಹಾಕಿ ಆರೋಗ್ಯ ಇಲಾಖೆ ಸುಪರ್ದಿಗೆ ವಹಿಸಿದರು.
ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದನ್ನು ಪ್ರಶ್ನಿಸಿ ಆರೋಗ್ಯ ಇಲಾಖೆ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಕೆಲವು ವರ್ಷಗಳ ಕಾಲ ವಿಚಾರಣೆ ನಡೆದ ನಂತರ 2021ರಲ್ಲಿ ಪ್ರಕರಣವನ್ನು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಆರೋಗ್ಯ ಇಲಾಖೆ ವ್ಯಾಪ್ತಿಯ 2.25 ಎಕರೆ ಜಮೀನಿನ ಪೈಕಿ ಎರಡೂವರೆ ಗುಂಟೆ ಜಾಗ ಒತ್ತುವರಿ ಮಾಡಲಾಗಿದೆ ಎಂದು ದಾವೆ ಹೂಡಲಾಗಿತ್ತು. ಈಗ ಆ ಜಾಗವನ್ನು 18/7/2024ರ ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನ ಮಾಡಿಕೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಗುರುಬಸವರಾಜ್, ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಹನುಮನಾಯ್ಕ, ನಗರಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ, ಕಂದಾಯ ಅಧಿಕಾರಿ ರಮೇಶ್, ಹಿರಿಯ ಆರೋಗ್ಯಾಧಿಕಾರಿ ಸಂತೋಷ್ ನಾಯ್ಕ, ಸಿಬ್ಬಂದಿ ಇದ್ದರು..