ಯರೇಹಂಚಿನಾಳದಲ್ಲಿ ಮೂರು ಶಾಸನ ಪತ್ತೆ

altered inscriptions found
ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಪತ್ತೆಯಾದ ಶಾಸನಗಳು.
Published on

ಕುಕನೂರು: ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಒಂದು ಪೂರ್ಣ ಮತ್ತು ಎರಡು ತ್ರುಟಿತ ಶಾಸನಗಳು ಪತ್ತೆಯಾಗಿವೆ ಎಂದು ನಿವೃತ್ತ ಸರ್ಕಾರಿ ಅಧಿಕಾರಿ, ಶಾಸನ ತಜ್ಞೆ ಹನುಮಾಕ್ಷಿ ಗೋಗಿ ತಿಳಿಸಿದ್ದಾರೆ.

ಈ ಶಾಸನಗಳ ಶೋಧದಿಂದ 12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಈ ಗ್ರಾಮ ಅಸ್ತಿತ್ವದಲ್ಲಿತ್ತು. ಜೈನ ಹಾಗೂ ಶೈವ ಧರ್ಮಗಳ ಪ್ರಭಾವ ಇತ್ತೆಂದು ತಿಳಿದು ಬರುತ್ತದೆ ಎಂದರು.

ಗ್ರಾಮದ ಕೆರೆಯ ಮೆಟ್ಟಿಲಿನ ಪಕ್ಕದ ಗೋಡೆಯಲ್ಲಿ ಪತ್ತೆಯಾದ ತ್ರುಟಿತ ಶಾಸನ 12ನೇ ಶತಮಾನದಾಗಿದ್ದು, ಕರಿ ಕಲ್ಲಿನಲ್ಲಿ ಕೆತ್ತಲಾಗಿದೆ. ಶಾಸನದ ಸುತ್ತಲಿನ ನಾಲ್ಕೂ ಭಾಗಗಳಿಲ್ಲ. ಪೆರ್ಮಾಡಿಯ ಬಿರುದಾವಳಿಗಳು ಮತ್ತು ಸಾಧನೆಗಳ ವಿವರಗಳು ಇದರಲ್ಲಿವೆ. ಇನ್ನು ಹಳೆಯ ಗ್ರಾಮದ ಬಳಿ ಹಳ್ಳದ ಬದುವಿನಲ್ಲಿ ಇನ್ನೊಂದು ಶಾಸನ ಪತ್ತೆಯಾಗಿದೆ.

ಇದು ಆರು ಅಡಿ ಎತ್ತರ, ಒಂದೂವರೆ ಅಡಿ ಅಗಲದ ಕಗ್ಗಲ್ಲಿನ ಮೇಲ್ಭಾಗದ ಮೂರು ಅಡಿ ಭಾಗವನ್ನು ಸಮತಟ್ಟು ಮಾಡಿಕೊಂಡು ಶಾಸನ ಕೆತ್ತಲಾಗಿದೆ. ಮತ್ತೊಂದು ಶಾಸನ ಪ್ರೌಢಶಾಲೆ ಆವರಣದಲ್ಲಿ ಪತ್ತೆಯಾಗಿದೆ. ಇದು 13ನೇ ಶತಮಾನದಾಗಿದ್ದು, ಬಳಪದ ಕಲ್ಲಾಗಿದೆ. ಶಾಸನದ ಹಿಂಭಾಗದಲ್ಲಿ ಉಡುಚಾದೇವಿ ಮೂರ್ತಿ ಕೆತ್ತಲಾಗಿದ್ದು, ಮೇಲ್ಭಾಗದ ಶಿಲ್ಪಗಳು ಲಭ್ಯವಾಗಿಲ್ಲ.

ಶಾಂತಿನಾಥ ತೀರ್ಥಂಕರರನ್ನು ಸ್ತುತಿಸುವ ಈ ಶಾಸನವು ಜೈನ ನಿಷಧಿಯಾಗಿದ್ದು, ಯಾದವ ಚಕ್ರವರ್ತಿ ಕನ್ನರನನ್ನು ವಿಶೇಷಣೆಗಳೊಂದಿಗೆ ಬಣ್ಣಿಸುತ್ತ, ಅಪೂರ್ಣಗೊಳ್ಳುತ್ತದೆ. ಯರೇಹಂಚಿನಾಳ ಗ್ರಾಮದಲ್ಲಿ ಶಾಂತಿನಾಥ ತೀರ್ಥಂಕರರ ಬಸದಿಯೊಂದು ಇತ್ತೆಂಬುದು ಮತ್ತು ಬಹುಶಾಸ್ತ್ರ ತರ್ಕಗಳಲ್ಲಿ ಪ್ರಾವೀಣ್ಯ ಹೊಂದಿದ ಮುನಿಯೊಬ್ಬ ಇಲ್ಲಿ ಮರಣವಾದಾಗ ಆತನ ಹೆಸರಿನಲ್ಲಿ ನಿಷಧಿಯೊಂದನ್ನು ನಿಲ್ಲಿಸಲಾಗಿತ್ತೆಂದು ತಿಳಿದುಬರುತ್ತದೆ.

‘ಕಹ್ನರರಾಯಂ ಪ್ರೌಢ ಪ್ರತಾಪ ಚಕ್ರವರ್ತಿ’ ಎನ್ನುವ ಉಕ್ತಿ ಶಾಸನದಲ್ಲಿ ಇರುವುದರಿಂದ ಯಾದವ ಚಕ್ರವರ್ತಿ ಕನ್ನರನ ಕಾಲದ ಕ್ರಿ.ಶ.1247-1261 ಶಾಸನವಾಗಿದೆಯೆಂದು ಸ್ಪಷ್ಟವಾಗುತ್ತದೆ. ಆದರೆ ತ್ರುಟಿತ ಶಾಸನವಾಗಿರುವುದರಿಂದ ವಿವರಗಳು ಲಭ್ಯವಾಗಿಲ್ಲ. ಶಾಸನ ಪರಿವೀಕ್ಷಣೆಯಲ್ಲಿ ಎನ್.ಕೆ.ತೆಗ್ಗಿನಮನಿ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net