ಖುಲಾಸೆಗೊಂಡಿದ್ದ ಇಬ್ಬರಿಗೆ ಮೇಲ್ಮನವಿ ನ್ಯಾಯಾಲಯದಲ್ಲಿ ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಗಾಂಜಾ ಮಾರಾಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದ ಅಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯ 3 ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಕಾವೂರು ಪಂಜಿಮೊಗರು ಉರುಂದಾಡಿಗುಡ್ಡೆಯ ಮನೋಜ್ ಕುಮಾರ್ (360 ಹಾಗೂ ಮಂಜೇಶ್ವರ ಉದ್ಯಾವರ ನಿವಾಸಿ ಮೊಹಮ್ಮದ್ ಕಲಂದರ್ (42) ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ವಿವರ: ಮನೋಜ್ ಪೂಜಾರಿ ಮತ್ತು ಮಹಮ್ಮದ್ ಕಲಂದರ್ ಅವರು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು 2016ರ ಜ.21ರಂದು ಕಾಟಿಪಳ್ಳ ಗ್ರಾಮದ 7ನೇ ಬ್ಲಾಕ್ ಚೊಕ್ಕಬೆಟ್ಟು ಪ್ಯಾರಡೈಸ್ ಮೈದಾನದ ಬಳಿಯ ಕೆ.ಇ.ಬಿ ಕ್ರಾಸ್ ರಸ್ತೆಯಲ್ಲಿರುವ ಅಲ್ ಅಮೀನ್ ಪಾರ್ಕ್‌ಗೆ ಬಂದಿದ್ದರು. ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಸುರತ್ಕಲ್ ಠಾಣೆ ಪೊಲೀಸರು ಮಂಜುನಾಥ್ ಬಳಿಯಿಂದ 400 ಗ್ರಾಂ ತೂಕದ ಗಾಂಜಾ ಮತ್ತು ತಲಾ 3 ಗ್ರಾಂ ಗಾಂಜಾ ಇರುವ 3 ಪ್ಯಾಕೇಟ್‌ಗಳನ್ನು ಕಲಂದರ್ ಬಳಿಯಿಂದ 500 ಗ್ರಾಂ ಗಾಂಜಾ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದರು. ಮಂಗಳೂರಿನ ಮಾನ್ಯ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನ್ಯಾಯಾಲಯವು ಆರೋಪಿತರನ್ನು ಬಿಡುಗಡೆಗೊಳಿಸಿತ್ತು.
ಬಿಡುಗಡೆ ಆದೇಶದ ವಿರುದ್ಧ ಅಭಿಯೋಜನೆಯು ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ಅಭಿಯೋಜನೆಯ ಹಾಗೂ ಆರೋಪಿತರ ಪರ ವಾದ ಪ್ರತಿವಾದವನ್ನು ಆಲಿಸಿ, ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಧೀಶರಾದ ಮೋಹನ ಜೆ. ಎಸ್. ಅವರು, ವಿಚಾರಣ ನ್ಯಾಯಾಲಯ 2026ರ ಮಾ.26ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ್ದಾರೆ. ಮುಂದುವರಿದು ಇಬ್ಬರು ಅಪರಾಧಿಗಳಿಗೆ ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ: 8(ಸಿ) ಮತ್ತು 20(29)()(ಎ) ಪ್ರಕಾರ 3 ತಿಂಗಳುಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 10,000 ರೂ. ದಂಡ ವಿಧಿಸಿ, ಮೇ 18ರಂದು ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಅವರು ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net