

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಜನತಾ ಕರ್ಫ್ಯೂ ಕರೆಗೆ ಭಾನುವಾರ ವಾಣಿಜ್ಯ ನಗರಿ ಅದ್ಭುತ ರೀತಿಯಲ್ಲಿ ಸ್ಪಂದಿಸಿತು.
ಹುಬ್ಬಳ್ಳಿ-ಧಾರವಾಡ ಬಂದ್ ಎಂದರೆ ಪ್ರಮುಖ ವೃತ್ತಗಳಲ್ಲಿ ಜನ ಗುಂಪುಗೂಡುವುದು, ಟೈರ್ ತಂದು ಸುಟ್ಟು ಕಡುಗಪ್ಪು ಹೊಗೆ ಆಕಾಶಕ್ಕೆ ನೆಗೆಯುವುದು, ಲಬೋ ಲಬೋ ಹೊಯ್ದುಕೊಳ್ಳುವುದು… ಹೀಗೆ ಆಗುತ್ತಿತ್ತು. ಆದರೆ, ಪ್ರಧಾನಿ ಕರೆ ನೀಡಿದ್ದ ಜನತಾ ಕರ್ಫ್ಯೂ ಇದೆಲ್ಲಕ್ಕಿಂತಲೂ ಭಿನ್ನವಾಗಿ ಐತಿಹಾಸಿಕ ಬಂದ್ ಆಗಿ ಕಂಡುಬಂತು.
ಸದಾ ಚಟುವಟಿಕೆಯಿಂದ ಇರುವ ಜನರು, ಭಾನುವಾರ ಎಂದೊಡನೆ ಕುಟುಂಬ ಸಮೇತ ಹೊರಗಡೆ ಹೋಗಿ ಸುತ್ತಾಡುವ ಹವ್ಯಾಸ ಇಟ್ಟುಕೊಂಡವರು ಸೇರಿ ಎಲ್ಲರೂ ಮನೆಯಲ್ಲೇ ಉಳಿದರು. ಬಸ್, ರೈಲು, ವಿಮಾನಗಳ ಸೇವೆ ಇರಲಿಲ್ಲ. ಯಾವ ವೃತ್ತ, ರಸ್ತೆ, ಓಣಿ ನೋಡಿದರೂ ಬಿಕೋ ಎನ್ನುತ್ತಿದ್ದವು. ಎಲ್ಲಿಯೂ ಜನ ಗುಂಪುಗೂಡಿ ಗೌಜು ಮಾಡಿದ್ದು ಕಂಡುಬರಲಿಲ್ಲ.
ವರ್ಷದ 365 ದಿನವೂ 24 ಗಂಟೆ ಕಾಲ ಕಾರ್ಯನಿರ್ವಹಿಸುವ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣ ಭಾನುವಾರ ಭಣಗುಡುತ್ತಿತ್ತು. ಬಸ್ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿತ್ತು. ಈ ನಡುವೆ ವಿಷಯ ತಿಳಿಯದೇ ನಗರಕ್ಕೆ ಆಗಮಿಸಿದ್ದ ಹಲವು ಪ್ರಯಾಣಿಕರು ದಿನವಿಡೀ ನಿಲ್ದಾಣದಲ್ಲಿಯೇ ಅತಂತ್ರರಾಗಿ ಕಾಲ ಕಳೆದರು.
ಶನಿವಾರ ರಾತ್ರಿ 10 ಗಂಟೆಯ ಬಳಿಕ ರೈಲು ಸಂಚಾರ ರದ್ದುಪಡಿಸಲಾಗಿತ್ತು. ಆದರೆ, ಅದಕ್ಕೂ ಪೂರ್ವ ವಿವಿಧೆಡೆಯಿಂದ ಹೊರಟ ಕೆಲ ರೈಲುಗಳು ಭಾನುವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದವು. ಈ ರೈಲಿನಲ್ಲಿ ಬಂದ ಕೆಲ ಪ್ರಯಾಣಿಕರು ಮುಂದೆ ಬಸ್ನಲ್ಲಿ ಬೇರೆ ಸ್ಥಳಗಳಿಗೆ ಹೋಗಲಾಗದೆ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು.
ಕೆಲವರಿಗೆ ಇಂದು ಜನತಾ ಕರ್ಫ್ಯೂ ಎಂಬುದು ತಿಳಿದಿರಲಿಲ್ಲವಂತೆ. ಬಸ್ ಸಂಚಾರ ರದ್ದು ಎಂಬುದು ಗೊತ್ತಿರಲಿಲ್ಲವಂತೆ. ಪೂರ್ವ ತಯಾರಿ ಇಲ್ಲದೇ ಬಂದಿದ್ದರಿಂದ ಊಟ, ಉಪಾಹಾರಕ್ಕೆ ಪರದಾಡಿದರು. ಸಂಪೂರ್ಣ ನಗರ ಬಂದ್ ಆಗಿತ್ತು.
‘ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದೇವೆ. ಹೊಸಪೇಟೆಗೆ ಹೋಗಲು ರೈಲು ಸಿಗದೇ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ಇಲ್ಲಿ ನೋಡಿದ್ರೆ ಬಸ್ ಇಲ್ಲ. ಸಂಜೆವರೆಗೆ ಕಾಯುತ್ತೇವೆ’ ಎಂದು ಸುಧಾಕರ ಕರಾತ್ ಎಂಬುವವರು ಹೇಳಿಕೊಂಡರು.
ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಹಲವರು ಇಂದು ನಗರಕ್ಕೆ ಮರಳಿ ಬಂದಿದ್ದರು. ಇಲ್ಲಿಂದ ಬೆಳಗಾವಿ, ಜಮಖಂಡಿಗೆ ಹೋಗಲು ಬಸ್ ಇರಲಿಲ್ಲ. ಸಂಜೆಯೊಳಗೆ ಖಾಸಗಿ ವಾಹನಗಳಾದರೂ ಸಿಗಬಹುದು ಎಂದು ಕಾಯುತ್ತಿದ್ದರು.
ಪರದಾಡಿದ ರೈಲ್ವೆ ಪ್ರಯಾಣಿಕರು: ವಿವಿಧೆಡೆಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ನೂರಾರು ಜನರು ಮುಂದಿನ ಪ್ರಯಾಣ ಕೈಗೊಳ್ಳದೆ ಪರದಾಡಿದರು.
ಬ್ಯಾಡಗಿಯ ಮೆಣಸಿನಕಾಯಿ ಕಾರ್ಖಾನೆಯಲ್ಲಿ ಕೆಲಸಕ್ಕಾಗಿ ಹಂಪಿ ಎಕ್ಸ್ಪ್ರೆಸ್ ರೈಲಿನ ಮೂಲಕ ಬಂದಿದ್ದ ಬಿಹಾರದ ಸಂತೋಷಕುಮಾರ ಎಂಬಾತ ಹುಬ್ಬಳ್ಳಿಗೆ ಬಂದಿಳಿದಿದ್ದ. ಬ್ಯಾಡಗಿಗೆ ಮರಳಲು ರೈಲು ಹಾಗೂ ಬಸ್ ಇರದ ಕಾರಣ ನಿಲ್ದಾಣದಲ್ಲಿಯೇ ಸುತ್ತಾಡುತ್ತಿದ್ದ.
ಶ್ರೀಶೈಲಕ್ಕೆ ತೆರಳಿದ್ದ ರಬಕವಿಯ 15ಕ್ಕೂ ಹೆಚ್ಚು ಜನರು ಹಂಪಿ ಎಕ್ಸ್ಪ್ರೆಸ್ ರೈಲಿನ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದರು. ಮಹಿಳೆಯರು, ವೃದ್ಧರು, ಮಕ್ಕಳು ಹೆಚ್ಚಿರುವ ಈ ತಂಡದಲ್ಲಿ ಮಕ್ಕಳು ಹಸಿವಿನಿಂದ ಅಳುತ್ತಿರುವುದು ಕರುಳು ಹಿಂಡುವಂತಿತ್ತು.
ಅಣ್ಣಿಗೇರಿಗೆ ಹೋಗಿದ್ದ ಹಾವೇರಿಯ ಇಬ್ಬರು ಮಹಿಳೆಯರು, ಬೆಂಗಳೂರಿಗೆ ಚಿಕಿತ್ಸೆಗೆ ತೆರಳಿದ್ದ ಬಾಗಲಕೋಟೆಯ ಯುವಕ, ರಜೆ ಮುಗಿಸಿ ಬೆಳಗಾವಿಯ ಸೇನಾ ನೆಲೆಗೆ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಹೈದರಾಬಾದ್ನ ಸೈನಿಕ ಸೇರಿ ನೂರಾರು ಜನರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಿಕ್ಕು ತೋಚದೆ ಕುಳಿತಿದ್ದರು.
ಕೆಲ ಪ್ರಯಾಣಿಕರಿಗೆ ಸಿದ್ಧಾರೂಢ ಮಠದಲ್ಲಿ ಆಶ್ರಯ ಒದಗಿಸುವ ಉದ್ದೇಶದಿಂದ ನಗರ ಸಾರಿಗೆ ಬಸ್ವೊಂದರಲ್ಲಿ ಮಠಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ, ಮಠದಲ್ಲಿಯೂ ಅನ್ನಪ್ರಸಾದ, ವಸತಿ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಅವರನ್ನು ಮರಳಿ ಕಳುಹಿಸಲಾಯಿತು.
ಕೆಲವೆಡೆ ಮಹಾನಗರ ಪಾಲಿಕೆಯಿಂದ ರಾಸಾಯನಿಕ ದ್ರವ ಸಿಂಪರಣೆ ಮಾಡಲಾಯಿತು. ಮಠ, ದೇವಸ್ಥಾನಗಳಲ್ಲಿ ಬೆಳಗ್ಗೆ ನಿತ್ಯದ ಪೂಜೆಗಳನ್ನು ಮಾಡಿ, ಬಾಗಿಲು ಮುಚ್ಚಲಾಯಿತು. ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಪೆಟ್ರೊಲ್ ಬಂಕ್ಗಳು ತೆರೆದಿದ್ದರೂ ಜನರು ಅತ್ತ ಸುಳಿಯಲಿಲ್ಲ.
8 ರೈಲುಗಳ ಸಂಚಾರ: ನಿಜಾಮುದ್ದೀನ್ ಎಕ್ಸ್ಪ್ರೆಸ್, ಬೆಂಗಳೂರು- ಗಾಂಧಿಧಾಮ ಎಕ್ಸ್ಪ್ರೆಸ್, ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ ಎಕ್ಸ್ಪ್ರೆಸ್, ಹರಿಪ್ರಿಯಾ ಎಕ್ಸ್ಪ್ರೆಸ್, ಹಂಪಿ ಎಕ್ಸ್ಪ್ರೆಸ್, ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ಪ್ರೆಸ್, ಜೋಧಪುರ-ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳು ಹುಬ್ಬಳ್ಳಿ ನಿಲ್ದಾಣದ ಮೂಲಕ ಸಂಜೆಯವರೆಗೆ ತೆರಳಿದವು. ರಾತ್ರಿ 10.30ಕ್ಕೆ ಚಂಡಿಗಢ-ಬೆಂಗಳೂರು ಸಂಪರ್ಕಕ್ರಾಂತಿ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದ ಮೂಲಕ ತೆರಳಿದ ಕೊನೆಯ ರೈಲು.
ಬಿಕೋ ಎನ್ನುತ್ತಿದ್ದ ನಿಲ್ದಾಣ: ಜನತಾ ಕರ್ಫ್ಯೂನಿಂದಾಗಿ ರೈಲುಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು, ಮುಂಗಡ ಟಿಕೆಟ್ ಪಡೆದ ಕೆಲ ಪ್ರಯಾಣಿಕರು ಹಾಗೂ ರೈಲ್ವೆಯ ಬೆರಳೆಣಿಕೆ ಸಿಬ್ಬಂದಿ ಮಾತ್ರ ಹಾಜರಿದ್ದರು.
ನರಳಿದ ಭಿಕ್ಷುಕರು: ರೈಲ್ವೆ ನಿಲ್ದಾಣದ ಸುತ್ತಲೂ ಭಿಕ್ಷೆ ಬೇಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ 10ಕ್ಕೂ ಹೆಚ್ಚು ಭಿಕ್ಷುಕರು ಜನತಾ ಕರ್ಫ್ಯೂನಿಂದಾಗಿ ಹೊಟ್ಟೆ ಹಸಿವಿನಿಂದ ನರಳುವಂತಾಯಿತು. ದಿನದ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇವರಿಗೆ ಭಾನುವಾರ ಭಿಕ್ಷೆ ಹಾಕುವವರೇ ಇರಲಿಲ್ಲ. ಮಧ್ಯಾಹ್ನದ ನಂತರ ಕೆಲ ಸಂಘಟನೆಗಳ ಕಾರ್ಯಕರ್ತರು ಊಟ ತಂದುಕೊಟ್ಟರು.
ಧಾರವಾಡ: ಜನತಾ ಕರ್ಫ್ಯೂಗೆ ಧಾರವಾಡ ನಗರ-ಗ್ರಾಮಾಂತರದಲ್ಲಿ ಭಾರಿ ಸ್ಪಂದನೆ ವ್ಯಕ್ತವಾಯಿತು. ಇಡೀ ನಗರವೇ ಸ್ತಬ್ಧವಾಗಿತ್ತು.
ನಗರ ಸಾರಿಗೆ ಬಸ್ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಅಲ್ಲಲ್ಲಿ ಕೆಲ ವಾಹನಗಳು ಕಾಣಿಸುತ್ತಿದ್ದವೇ ಹೊರತು, ಜನನಿಬಿಡಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣಗಳು ಸಹ ಬಿಕೋ ಎನ್ನುತ್ತಿದ್ದವು.
ಈ ಹಿಂದೆಲ್ಲ ಕೆಲ ಹೋರಾಟಗಳಿಗಾಗಿ ಸಂಘ- ಸಂಸ್ಥೆಗಳು ಬಂದ್ ಕರೆ ನೀಡಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಕೆಲವರು ಅಂಗಡಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದರು. ಆದರೆ, ಭಾನುವಾರ ಮಾತ್ರ ಇಂತಹ ಯಾವ ದೃಶ್ಯಗಳೂ ಕಾಣಲಿಲ್ಲ.
ಜನರ ನಿತ್ಯ ಜೀವನಕ್ಕೆ ಅಗತ್ಯವಾಗಿರುವ ಹಾಲು, ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್, ಎಟಿಎಂ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದರು. ನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಸೂಪರ್ ಮಾರುಕಟ್ಟೆ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ನಿತ್ಯ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು ಸೇರಿ ಎಲ್ಲ ಪ್ರಮುಖ ಉದ್ದಿಮೆದಾರರೂ ಬಂದ್ಗೆ ಬೆಂಬಲ ನೀಡಿದ್ದರಿಂದ ಇಡೀ ಮಾರುಕಟ್ಟೆ ಖಾಲಿ ಖಾಲಿಯಾಗಿತ್ತು. ನಗರದ ಬಿಆರ್ಟಿಎಸ್ ಟರ್ವಿುನಲ್, ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಥಳೀಯ ಬಸ್ ನಿಲ್ದಾಣಗಳು ಸಹ ಬಸ್ಗಳು ಇಲ್ಲದೆ ಭಣಗುಡುತ್ತಿದ್ದವು. ಎಲ್ಲ ಬಸ್ ಸಂಚಾರ ರದ್ದು ಮಾಡಿ ಶನಿವಾರವೇ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಎಲ್ಲ ಬಸ್ಗಳು ಡಿಪೋ ಸೇರಿದ್ದವು.
ಅಭಿನಂದನೆ ಸಲ್ಲಿಸಿದ ಜನತೆ: ಇಡೀ ದಿನ ಮನೆಯಲ್ಲೇ ಕಾಲ ಕಳೆದು ಕರ್ಫ್ಯೂಗೆ ಬೆಂಬಲ ನೀಡಿದ ಜನರು ಸಂಜೆ 5 ಗಂಟೆಗೆ ಮನೆಯಿಂದ ಹೊರ ಬಂದು ದೇಶದ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದರು. ದೇಶದ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ಪೌರ ಕಾರ್ವಿುಕರು; ವಿವಿಧ ಸ್ತರದ ಅಧಿಕಾರಿ- ಸಿಬ್ಬಂದಿ ವರ್ಗದವರು ಸೇರಿ ಬೇರೆ ಬೇರೆ ಸಾಮಾಜಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜನರ ಕಾರ್ಯ ಮೆಚ್ಚಿ ಚಪ್ಪಾಳೆ, ಗಂಟೆ, ಜಾಗಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಎಂದಿನಂತೆ ಕಾರ್ಯ: ಇಡೀ ನಗರವೇ ಸ್ತಬ್ಧವಾಗಿದ್ದರೆ ಪೌರ ಕಾರ್ವಿುಕರು ಮಾತ್ರ ಎಂದಿನಂತೆ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಕಾರಣಕ್ಕೆ ಪೌರ ಕಾರ್ವಿುಕರಿಗೆ ರಜೆ ಇರಲಿಲ್ಲ. ಆದರೆ, ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಾರ್ಯ ನಿರ್ವಹಿಸಬೇಕು ಎಂದು ಪಾಲಿಕೆ ಆಯುಕ್ತರು ಶನಿವಾರವೇ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಎಲ್ಲ ಕಡೆಗಳಲ್ಲಿ ಪೌರ ಕಾರ್ವಿುಕರು ತಮ್ಮ ಕಾರ್ಯದಲ್ಲಿ ತೊಡಗಿದ್ದರು. ಮನೆ ಮನೆಯಿಂದ ನೇರವಾಗಿ ಕಸ ಸಂಗ್ರಹ ಮಾಡುವ ವಾಹನಗಳು ಸಹ ಆಗಮಿಸಿದ್ದವು.