

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಡುಕುತ್ಯಾರಿನ ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತಿ ಪೀಠದಲ್ಲಿ ಸೆ.5ರಿಂದ 6ರ ಸೂರ್ಯೋದಯ ತನಕ ದ್ವಾದಶ ರಾಶಿಪೂಜೆ ನೆರವೇರಲಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು ಹಾಗೂ ರಾಶಿಪೂಜೆಯ ಸಂಯೋಜಕ ನವೀನ್ ಶೆಟ್ಟಿ ಕುತ್ಯಾರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನಿ ಪಾಠ ಶಾಲೆಯ ಶ್ರೀ ಸರಸ್ವತಿ ಪೂರ್ವಚಾತ್ರ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
4ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ, 5ರಂದು ಶ್ರೀ ಸರಸ್ವತೀ ಯಾಗಶಾಲೆಯ ಸರಸ್ವತೀ ಮಂಟಪಕ್ಕೆ ಪೀಠಮಾತೆ ಶ್ರೀ ಮಹಾಸರಸ್ವತಿ ದೇವಿ ಮೂರ್ತಿ ಆಗಮನವಾಗಿ ನಂತರ ರಾಶಿಪೂಜೆ ಆರಂಭಗೊಳ್ಳಲಿದೆ. ಅಂದು ಬೆಳಗ್ಗೆ ದ್ವಾದಶ ಪೂಜೆ ಆರಂಭಗೊಳ್ಳಲಿದ್ದು, 6ರಂದು ಪೀಠಮಾತೆಗೆ ವಿಶೇಷ ರಾಜೋಪಚಾರ ಮಹಾಪೂಜೆ ಬಳಿಕ ಬಲಿ ಉತ್ಸವ, ಅವಭೃತದೊಂದಿಗೆ ಸಂಪನ್ನಗೊಳ್ಳಲಿದೆ. ಬಳಿಕ 12 ರಾಶಿಗೆ ಅನುಗುಣವಾಗಿ ಬಣ್ಣದ ರಾಶಿ ಮಂಟಪಗಳಲ್ಲಿ ಶ್ರೀ ಮಹಾಸರಸ್ವತಿ ದೇವಿಗೆ ನೈವೇದ್ಯ, ಭಜನಾ ಸಂಕೀರ್ತನೆ, ಅಷ್ಟಾವಧಾನಸೇವೆ ಸಮರ್ಪಣೆಯಾಗಲಿದೆ. ಭಕ್ತರ ರಾಶಿಗೆ ಅನುಗುಣವಾಗಿ ನಿಗದಿತ ಅವಧಿಯಲ್ಲಿ ವಿಶೇಷ ಗುರುತುಚೀಟಿ ನೀಡಿ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.
ದ್ವಾದಶ ರಾಶಿಪೂಜೆಯಲ್ಲಿ ಆಸ್ಥಾನ ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಉಮೇಶ್ ಆಚಾರ್ಯ ಪಡೀಲು, ವೈದಿಕ ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್, ಶ್ರೀಧರ ಶರ್ಮ ಕಟಪಾಡಿ, ಲಕ್ಷ್ಮೀಕಾಂತ ಶರ್ಮ ಬಾರ್ಕೂರು ಮತ್ತಿತರರು ಭಾಗವಹಿಸುವರು. ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಚಾತುರ್ಮಾಸ್ಯದ ಗುರುಪಾದುಕಾಪೂಜೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸುವರು. ನಟ ಶಶಿರಾಜ್ ಆಚಾರ್ಯ ಕುತ್ಯಾರು, ರಾಧಾಕೃಷ್ಣ ಆಚಾರ್ಯ ಕುಂಬಳೆ ಅವರನ್ನು ಅಭಿನಂದಿಸಲಾಗುವುದು ಎಂದು ನವೀನ್ ಶೆಟ್ಟಿ ಕುತ್ಯಾರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಮನೋಜ್ ಶರ್ಮ, ಶಿಲ್ಪಾ ಜಿ.ಸುವರ್ಣ ಕಟಪಾಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಲೋಲಾಕ್ಷ ಶರ್ಮ ಕಟಪಾಡಿ, ಬೆಳುವಾಯಿ ಸುಂದರ ಆಚಾರ್ಯ, ಜಯಕರ ಆಚಾರ್ಯ ಕರಂಬಳ್ಳಿ ಉಪಸ್ಥಿತರಿದ್ದರು.