

ಮೈಸೂರು: 12ನೇ ಶತಮಾನದ ವಿಚಾರಧಾರೆ ಸಾರ್ವಕಾಲಿಕವಾಗಿದ್ದು, ಆ ವಿಚಾರಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದು ಶ್ರೀ ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್‌ನ ಅಧ್ಯಕ್ಷ ಡಾ.ಬಾನು ಪ್ರಕಾಶ್ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ರಾಜೇಂದ್ರನಗರದ ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಪ್ರಬಂಧ ಸ್ಪರ್ಧೆ ಹಾಗೂ ಚಿಂತನಾ ಗೋಷ್ಠಿ’ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ವಿಚಾರಧಾರೆಗಳು ಎಲ್ಲರಿಗೂ ಬೇಕಿದೆ. ಮುಖ್ಯವಾಗಿ ಇಂದಿನ ಯುವ ಪೀಳಿಗೆ ಆ ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಶರಣ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯದ ಮಹತ್ವ ತಿಳಿಸಬೇಕಾಗಿದೆ ಎಂದರು.
‘ಆಧುನಿಕ ಬದುಕಿನ ಸವಾಲುಗಳು ಮತ್ತು ವಚನ ಸಾಹಿತ್ಯ’ ವಿಷಯ ಕುರಿತು ಉಪನ್ಯಾಸ ನೀಡಿದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಪ್ರಾಧ್ಯಾಪಕ ಎಸ್.ಎಸ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನಿರಂತರತೆಯನ್ನು ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಹಾಗಾಗಿ ವಚನ ಸಾಹಿತ್ಯದ ಬಗ್ಗೆ ಆಳವಾಗಿ ತಿಳಿಯಬೇಕು ಎಂದರು.
ಶರಣ ಸಾಹಿತ್ಯ ಪರಿಷತ್‌ನ ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ನಮ್ಮ ಬದುಕು ತಲ್ಲಣಗಳಿಗೆ ಹಾಗೂ ವಿಶ್ವದ ಸರ್ವ ಜನಾಂಗದ ಅಭಿವೃದ್ಧಿಗೆ ವಚನದಲ್ಲಿ ಶಾಶ್ವತ ಬೆಳಕು ಸಿಗಲಿದೆ. ಆದ್ದರಿಂದ ಎಲ್ಲರೂ ವಚನ ಸಾಹಿತ್ಯವನ್ನು ಸ್ವೀಕರಿಸಬೇಕು. ಆ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಸಿ.ಅಂತೋಣಿ ಪಾಲ್‌ರಾಜ್, ಘಟಕದ ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ ಹಾಗೂ ದತ್ತಿ ದಾಸೋಹಿಗಳು ಇದ್ದರು. ಇದೇ ವೇಳೆ ವಚನ ಸಾಹಿತ್ಯ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.