ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡರ ಟಿವಿ ರಾಜಕೀಯ

IMG-20220824-WA0049
Published on

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಜನರನ್ನು ಮೆಚ್ಚಿಸಲು ಆರೋಗ್ಯ, ಉದ್ಯೋಗ ಮೇಳಗಳ ಆಯೋಜನೆ ಮಾಡಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಇದೀಗ ಟಿವಿ ರಾಜಕೀಯಕ್ಕೆ ಮುಂದಾಗಿದ್ದಾರೆ. ಗೌರಿ ಗಣೇಶ ಹಬ್ಬದ ಹೆಸರಿನಲ್ಲಿ ತಮ್ಮ ಬೆಂಬಲಿಗರಿಗೆ ಸ್ಮಾರ್ಟ್ ಟಿವಿಗಳನ್ನು ಕೊಟ್ಟು ಮುಂದಿನ ಚುನಾವಣೆಗೆ ಕಸರತ್ತು ನಡೆಸುತ್ತಿದ್ದಾರೆ.
ಸಚಿವ ಸ್ಥಾನದ ಅಧಿಕಾರವನ್ನು ಬಳಸಿಕೊಂಡು ಸರ್ಕಾರದ ಪ್ರಮುಖ ಕಾರ್ಯಕ್ರಮಗಳನ್ನು ಕೆ.ಆರ್.ಪೇಟೆ ಕ್ಷೇತ್ರದಲ್ಲಿಯೇ ಆಯೋಜಿಸಿ ಜನರ ಮನಗೆಲ್ಲುವ ತಂತ್ರಗಾರಿಕೆ ಮಾಡಿದ್ದ ಕೆಸಿಎನ್, ಈಗ ಮುಂದಿನ ಭಾಗವಾಗಿ ತಮ್ಮ ಬೆಂಬಲಿಗರನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ. ಅದಕ್ಕಾಗಿ ಟಿವಿಗಳನ್ನು ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ, ಸಂತೆಬಾಚಹಳ್ಳಿ ಹೋಬಳಿಗಳಿಗೆ ವಿತರಣೆ ಮಾಡಿದ್ದು, ಉಳಿದೆಡೆಯೂ ಶೀಘ್ರದಲ್ಲಿಯೇ ಹಂಚಿಕೆಯಾಗಲಿದೆ.
ಹಿಂದೆಯೇ ಟಿವಿಗಳ ಖರೀದಿ: ಮೂಲಗಳ ಪ್ರಕಾರ ಕೆಲ ತಿಂಗಳ ಹಿಂದೆಯೇ ಟಿವಿಗಳನ್ನು ಖರೀದಿಸಿದ್ದ ಕೆಸಿಎನ್, ವಿತರಣೆ ಮಾಡಿರಲಿಲ್ಲ. ಬೇರೆ ರಾಜ್ಯದಿಂದ ಆಮದು ಮಾಡಿಕೊಂಡಿದ್ದ ಟಿವಿಗಳನ್ನು ಒಂದೆಡೆ ಸಂಗ್ರಹಿಸಿಟ್ಟುಕೊಂಡಿದ್ದರು ಎನ್ನಲಾಗಿದೆ. ಇದೀಗ ಹಬ್ಬವಿರುವುದರಿಂದ ಜತೆಗೆ ವಿಧಾನಸಭಾ ಚುನಾವಣೆಯೂ ಸಮೀಪದಲ್ಲಿಯೇ ಇರುವುದರಿಂದ ಬೆಂಬಲಿಗರ ಒಲೈಕೆ ಮಾಡುತ್ತಿದ್ದಾರೆ. ಟಿವಿಗಳ ಮೇಲೆ ಶುಭಾಷಯದ ಸ್ಟಿಕ್ಕರ್ ಅಂಟಿಸಿ ಬೆಂಬಲಿಗರನ್ನು ಒಂದೆಡೆ ಸೇರಿಸಿ ಹಂಚಿಕೆ ಮಾಡಲಾಗುತ್ತಿದೆ.
ಟಿವಿಗಳ ಹಂಚಿಕೆ ಹಿಂದೆಯೂ ಒಂದು ಕಾರಣವಿದೆ. ಕೆಲ ದಿನದ ಹಿಂದೆ ಜೆಡಿಎಸ್ ಮುಖಂಡರು ಹೋಬಳಿವಾರು ಬೆಂಬಲಿಗರಿಗೆ ಬಾಡೂಟ ಹಾಕಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಚಿವರು ತಾವೇನೂ ಕಮ್ಮಿ ಎನ್ನುವಂತೆ ಟಿವಿಯನ್ನೇ ಕೊಟ್ಟು ‘ಋಣ ಹೊರೆಸುವ ರಾಜಕಾರಣ’ ಮಾಡುತ್ತಿದ್ದಾರೆ. ವಿಶೇಷವೆಂದರೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿರುವ ಹಾಗೂ ಸೋಲು ಅನುಭವಿಸಿರುವವರಿಗೆ ಉಡುಗೊರೆ ನೀಡಲಾಗುತ್ತಿದೆ.
ಎಂಎಲ್‌ಸಿ ಚುನಾವಣೆ ನೆನಪು: ಕೆಸಿಎನ್ ತಂತ್ರಗಾರಿಕೆ ನೋಡಿದವರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂದಿನ ಬೆಳವಣಿಗೆ ಕಂಡು ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂಬ ವಿಶ್ವಾಸ ಬಿಜೆಪಿ ರಾಜ್ಯ ನಾಯಕರಲ್ಲಿ ಹೆಚ್ಚಾಗಿ ಕಂಡುಬಂದಿತ್ತು. ಇನ್ನು ಉಸ್ತುವಾರಿಯನ್ನು ಕೆಸಿಎನ್ ಅವರೇ ವಹಿಸಿದ್ದರು. ಆದರೆ ಲಿತಾಂಶ ಎಲ್ಲವನ್ನೂ ತಲೆಕೆಳಗೆ ಮಾಡಿ ಬಿಜೆಪಿಗೆ ಹೀನಾಯ ಸೋಲಾಗಿತ್ತು. ಜತೆಗೆ ಆ ಚುನಾವಣೆಯಲ್ಲಿ ಗಳಿಸಿದ ಮತಗಳ ಸಂಖ್ಯೆಯನ್ನು ಕಂಡು ಸಾಕಷ್ಟು ಪ್ರಶ್ನೆ ಹುಟ್ಟಿಕೊಂಡಿತ್ತು. ಪ್ರಮುಖವಾಗಿ ಜಿಲ್ಲೆಯಲ್ಲಿ 500 ರಿಂದ 700 ಮತಗಳಿದ್ದರೂ ಅದರಲ್ಲೂ ಕೆ.ಅರ್.ಪೇಟೆ ಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯರಿದ್ದರೂ ಏಕೆ ಮತವಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದರ ಜತೆಗೆ ಕೆಸಿಎನ್ ಅವರೇ ಚುನಾವಣೆ ಬಗ್ಗೆ ಆಸಕ್ತಿ ಹೊಂದಿರಲಿಲ್ಲ ಎನ್ನುವ ಚರ್ಚೆ ನಡೆದಿತ್ತು. ಆದರೆ ಈಗ ಪ್ರತಿ ಗ್ರಾಮ ಪಂಚಾಯಿತಿವಾರು ಪಕ್ಷದ ಬೆಂಬಲಿತರನ್ನು ಸಂಪರ್ಕಿಸಿ ಟಿವಿ ಕೊಡುವ ಮೂಲಕ ಮುಂದಿನ ಚುನಾವಣೆಗೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಎಂಎಲ್‌ಸಿ ಚುನಾವಣೆಯಲ್ಲಿ ಇಂತಹ ಒಂದು ತಂತ್ರಗಾರಿಕೆಯನ್ನೂ ಮಾಡಲು ಕನಿಷ್ಟ ಆಸಕ್ತಿ ತೋರದಿರಲು ಕಾರಣವೇನೆಂದು ಚರ್ಚಿಸುತ್ತಿದ್ದಾರೆ.
ಒಟ್ಟಾರೆ ಮುಂದಿನ ಚುನಾವಣೆಗೆ ಈಗಲೇ ಗ್‌ಟಿಗಳನ್ನು ಕೊಡುವ ಮೂಲಕ ಮನವೊಲಿಕೆ ಮಾಡುತ್ತಿರುವ ಕೆಸಿಎನ್, ದಿನಕಳೆದಂತೆ ಇನ್ನೆನ್ನೂ ತಂತ್ರಗಾರಿಕೆ ಮಾಡುತ್ತಾರೆನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net