ಟ್ಯುಟೋರಿಯಲ್​ ಸೇವೆ ಸಮಾಜಕ್ಕೆ ಮಾದರಿ

1 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಟ್ಯುಟೋರಿಯಲ್​ ಎಲ್ಲ ತರಬೇತಿದಾರರು ಒಂದುಗೂಡಿ ಶೈಕ್ಷಣ ಸಾಧನೆ ಮಾಡುವುದರ ಜತೆಗೆ ಸಾಮಾಜಿಕವಾಗಿ ನಡೆಸುತ್ತಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಅರುಣ ಶಹಾಪುರ ಅಭಿಪ್ರಾಯಪಟ್ಟರು.

ಧಾರವಾಡ ಟ್ಯುಟೋರಿಯಲ್​ ಅಸೋಸಿಯೇಷನ್​ ವತಿಯಿಂದ ನಗರದ ಗುರುಕುಲ ಅಕಾಡೆಮಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಒಂದೇ ಮನೆಯಲ್ಲಿ ಹೊಂದಾಣಿಕೆ ಆಗುವುದೇ ಕಷ್ಟವಿರುವಾಗ, ಸ್ಪರ್ಧಾತ್ಮಕ ಸಂದರ್ಭದಲ್ಲಿ ಟ್ಯುಟೋರಿಯಲ್​ಗಳು ಒಗ್ಗಟ್ಟಾಗಿ ಅಸೋಸಿಯೇಷನ್​ ಮಾಡಿಕೊಂಡಿರುವುದು ಬಹಳ ಉತ್ತಮವಾದ ಕೆಲಸ. ಈ ಸಂಸ್ಥೆಯಿಂದ ಈಗಾಗಲೇ 80 ವರ್ಷ ಮೇಲ್ಪಟ್ಟ ನಿವೃತ್ತ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಇದೀಗ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ಸಾಧಕರನ್ನು ಸನ್ಮಾನಿಸಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ರಾಜ್ಯಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳೇ ಉತ್ತಮ ಸಾಧನೆ ಮಾಡುತ್ತಿವೆ. ವಿಶೇಷವಾಗಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಯ ಮಕ್ಕಳು ಧಾರವಾಡಕ್ಕೆ ಬಂದು ಕೋಚಿಂಗ್​ ತೆಗೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣೀಭೂತರಾಗಿದ್ದಾರೆ. ಇಂತಹ ಫಲಿತಾಂಶಕ್ಕೆ ಹಗಲಿರುಳು ಶ್ರಮಿಸಿ ಮಕ್ಕಳಿಗೆ ಕಡಿಮೆ ಅವಧಿಯಲ್ಲೇ ಒಂದು ಸ್ಫೂರ್ತಿ ತುಂಬುವ ಧಾರವಾಡ ಟ್ಯುಟೋರಿಯಲ್​ ಅಸೋಸಿಯೇಷನ್​ ಕಾರ್ಯ ಮೆಚ್ಚುವಂತಹದ್ದು ಎಂದರು.

ಇತ್ತೀಚಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್​ ಸದಸ್ಯರಾಗಿ ಆಯ್ಕೆಯಾದ ರಾರಾಬರ್ಟ್ ದದ್ದಾಪುರಿ, ಹಂಪಿ ಕನ್ನಡ ವಿವಿಯಿಂದ ಪಿಎಚ್​.ಡಿ ಪದವಿ ಪಡೆದ ಎಕ್ಸಲಂಟ್​ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಸತೀಶ ಜಾಧವ, ಇಂಡೋನೋಷ್ಯಾದ ಗ್ಲೋಬಲ್​ ಅಚೀವರ್ಸ್​ ಅವಾರ್ಡ್​ ಪಡೆದ ಅಣ್ಣಿಗೇರಿ ಶಿಣ ಸಂಸ್ಥೆ ಮುಖ್ಯಸ್ಥ ನಾಗೇಶ ಅಣ್ಣಿಗೇರಿ, ಉತ್ತರ ಕರ್ನಾಟಕ ಸುವರ್ಣ ಸಾಧಕ ಪ್ರಶಸ್ತಿ ಪಡೆದ ಜೋಶಿ ಟ್ಯುಟೋರಿಯಲ್​ನ ವಿನಾಯಕ ಜೋಶಿ, ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಶಸ್ತಿ ಪಡೆದ ಎ. ಎಂ. ಹೊಸೂರ ಅವರಿಗೆ ಸನ್ಮಾನಿಸಲಾಯಿತು.

ಗುರುಕುಲ ಅಕಾಡೆಮಿ ಮುಖ್ಯಸ್ಥ ಎನ್​.ಎಂ. ಪಾಟೀಲ ಸ್ವಾಗತಿಸಿದರು. ತಿಗಡಿ ಎಕ್ಸಲಂಟ್​ ಟ್ಯುಟೋರಿಯಲ್​ನ ಮುಖ್ಯಸ್ಥ ನಾಗರಾಜ ತಿಗಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಗತಿ ಕರಿಯರ ಅಕಾಡೆಮಿಯ ಮಲ್ಲನಗೌಡ ಗುಬ್ಬಿ ನಿರೂಪಿಸಿದರು. ಅಂಗಡಿ ಕೋಚಿಂಗ್​ ಕ್ಲಾಸಿಸ್​ನ ಅಶೋಕ ಅಂಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net