ಮನೆ-ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಶೀಲಿಸಿದ ತುಷಾರ್ ಗಿರಿನಾಥ್

voter list
Published on

ಬೆಂಗಳೂರು: ಮಹಾನಗರದಲ್ಲಿ ನಡೆದಿರುವ ಮತದಾರರಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಪಟ್ಟಿಯ ಸಾಚಾತನವನ್ನು ಖುದ್ದು ಪರಿಶೀಲಿಸಲು ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮನೆ-ಮನೆಗೆ ಭೇಟಿ ನಿಡಿ ವೋಟರ್ ಲಿಸ್ಟ್‌ನ್ನು ಪರಾಮರ್ಶಿಸಿದರು.

ಬೆಂಗಳೂರು ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗದ ಇತ್ತೀಚಿಗೆ ನಿರ್ದೇಶನ ನೀಡಿತ್ತು. ಅದರನ್ವಯ ಗುರುವಾರ ಮುಖ್ಯ ಆಯುಕ್ತರು ಶಿವಾಜಿನಗರ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳ ನಮೂನೆಗಳನ್ನು ಪರಿಶೀಲಿಸಿದ ಬಳಿಕ ಹೆಬ್ಬಾಳ ಹಾಗೂ ಯಲಹಂಕ ಕ್ಷೇತ್ರಗಳ ಕೆಲ ಮನೆಗಳಿಗೆ ಖುದ್ದು ತೆರಳಿ ಮತದಾರರಿಂದಲೇ ಮಾಹಿತಿ ಪಡೆದರು.

ಹೆಬ್ಬಾಳ ಕ್ಷೇತ್ರದ ಸಂಜಯನಗರದ ಅಮರಜ್ಯೋತಿ ಲೇಔಟ್‌ನಲ್ಲಿ ನಮೂನೆ 6ರ ಮೂಲಕ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಾಗಶೆಟ್ಟಿಹಳ್ಳಿಯ ಟೀಚರ್ಸ್ ಕಾಲೋನಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಮೊದಲ ಮತದಾರ ಮನೆಗೆ ಭೆಟಿ ನೀಡಿ ನಮೂನೆಯನ್ನು ಪರಿಶೀಲಿಸಿದರು.

ಅರ್ಜಿ ತಿರಸ್ಕಾರ:

ಯಲಹಂಕ ಕ್ಷೇತ್ರದ ಪೂರ್ವಾಂಕರ ಅಪಾರ್ಟ್‌ಮೆಂಟ್‌ನಲ್ಲಿ ನಮೂನೆಯನ್ನು ಪರಿಶೀಲಿಸಿ, ಮತದಾರ ಸ್ಥಳಾಂತರ ಮಾಡಿಕೊಂಡಿರುವುದಾಗಿ ನಮೂನೆ-7ರ ಮೂಲಕ ಅರ್ಜಿ ಸಲ್ಲಿಸಿರುವ ಪ್ರಕಾರ ತಿರಸ್ಕರಿಸಲಾಗಿದೆ. ಮತ್ತೊಮ್ಮೆ ನಮೂನೆ ಸಲ್ಲಿಸಿದ್ದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ರೈಲ್ವೆ ಗಾಲಿ ಕಾರ್ಖೆನೆ ವಸತಿ ಸಮುಚ್ಚಯದಲ್ಲಿ ನಮೂನೆ ಪರಿಶೀಲಿಸಿದಾಗ ಮತದಾರ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರುವ ಕಾರಣ ನಮೂನೆಯನ್ನು ತಿರಸ್ಕರಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ನಮೂನೆಗಳನ್ನು ಸೂಪರ್ ಚೆಕ್ಕಿಂಗ್ ಮಾಡಿ ಎಲ್ಲವೂ ಸರಿಯಿದ್ದು, ನಮೂನೆಗಳಿಗೆ ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜತೆಗೆ ಎರಡೂ ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ ಒಂದು ಕಡೆ ಹೆಸರನ್ನು ತೆಗೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂತಿಮ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದು, ಅದಕ್ಕೂ ಮುನ್ನ ಲೋಪ-ದೋಷಗಳನ್ನು ಸರಿಪಡಿಸಲು ಎಲ್ಲ 28 ಕ್ಷೇತ್ರಗಳಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಎಲ್ಲ ಬಿಎಲ್ಒ ಮತ್ತು ಮೇಲ್ವಿಚಾರಕರುಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಶುದ್ಧೀಕರಿಸುವಲ್ಲಿ ನಿರತರಾಗಿದ್ದಾರೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಈ ವೇಳೆ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಉತ್ತರ) ಸ್ನೇಹಲ್, ಮತದಾರ ನೋಂದಣಾಧಿಕಾರಿ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net