

ಬೆಂಗಳೂರು: ಬೆಂಗಳೂರು ಉತ್ತರ ಭಾಗದಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಸಮಸ್ಯೆಗೆ ಒಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹೊಸ ಏರ್‌ಪೋರ್ಟ್ ರಸ್ತೆಯಲ್ಲಿ ಮಳೆ ಅನಾಹುತ ತಡೆಯಲು ಪಾಲಿಕೆ, ಜಲಮಂಡಳಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗಲು ಬಿಡಿಎಯಿಂದ 1,200 ಎಂ.ಎಂ. ಗಾತ್ರ ಪೈಪ್ ಅಳವಡಿಸಲಾಗಿದೆ. ಈ ಸ್ಥಳದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಫಿಲ್ಲರ್‌ಗಳ ಫೈಲಿಂಗ್ ಕಾಮಗಾರಿಯ ವೇಳೆ ಮಳೆ ನೀರು ಹರಿದು ಹೋಗಲು ಅಳವಡಿಸಿದ್ದ ಕೊಳವೆ ಕಸದಿಂದ ಕಟ್ಟಿಕೊಂಡ ಕಾರಣ ಮಳೆನೀರು ರಾಜಕಾಲುವೆಗೆ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಳೆನೀರು ರಸ್ತೆಯ ಮೇಲೆ ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ವಿಷಯದಲ್ಲಿ ಬಿಡಿಎ ಅಧಿಕಾರಿಗಳು ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪೈಪ್‌ಲೈನ್ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ಸಹಕಾರನಗರದ ಬಳಿ ಪರಿಶೀಲನೆ:
ಸಹಕಾರನಗರದ ಪ್ರವೇಶ ಸ್ಥಳದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಮಳೆಯಾದರೆ ಜಲಾವೃತವಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸ್ಥಳದಲ್ಲಿ ಜಲಮಂಡಳಿ ಅಳವಡಿಸಿರುವ ಒಳಚರಂಡಿ ನೀರು ಕೂಡಾ ಹೊರ ಬರುತ್ತಿದ್ದು, ಹೆಚ್ಚು ಜಲಾವೃತವಾಗಲು ಕಾರಣವಾಗಿದೆ. ರಾಜಕಾಲುವೆಗೆ ನೀರು ಹೋಗಲು ಎನ್‌ಎಚ್‌ಎಐ ಮಾಡಿರುವ ಕಲ್ವರ್ಟ್ ಸಂಪರ್ಕ ಸರಿಯಾಗಿಲ್ಲದ ಕಾರಣ ನೀರು ನಿಲ್ಲುತ್ತದೆ. ಆದ್ದರಿಂದ ಜಲಮಂಡಳಿಯಿಂದ ರಸ್ತೆಯ ಎರಡೂ ಬದಿ 900 ಎಂ.ಎಂ. ಪೈಪ್ ಅಳವಡಿಸಲು ಜಲಮಂಡಳಿ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಜತೆಗೆ ಕರ್ಲ್ವನಿಂದ ರಾಜಕಾಲುವೆ ನೀರು ಹರಿದು ಹೋಗಲು ಪೈಪ್ ಅಳವಡಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ಸಹಕಾರನಗರ ಬಾಟಾ ಶೋ ರೂಂ ಬಳಿ ರಾಜಕಾಲುವೆಯನ್ನು ಪರಿಶೀಲಿಸಿ ಮಳೆ ನೀರು ಎರಡೂ ಕಡೆ ಬರುತ್ತಿದ್ದು, ಜೋರು ಮಳೆಯಾದ ವೇಳೆ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆಗೆ ಬರುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಕಾಲುವೆಯಲ್ಲಿ ತಿರುವು ವ್ಯವಸ್ಥೆ ಮಾಡಬೇಕು. ಇದೇ ಸ್ಥಳದಲ್ಲಿ ರಾಜಕಾಲುವೆಯನ್ನು ಪರಿಶೀಲಿಸಿ ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ಪರಿಶೀಲಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕೋಗಿಲು ಸಿಗ್ನಲ್ ಬಳಿ ಕಾಮಗಾರಿ ಪರಿಶೀಲನೆ:
ಕೋಗಿಲು ಸಿಗ್ನಲ್ ಬಳಿ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಮಳೆಯಾದರೆ ಮಳೆ ನೀರು ನಿಂತು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಸದರಿ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ಕ್ರಮ ಕೈಗೊಂಡು ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ರಾಚೇನಹಳ್ಳಿ ಕೆರೆ ಬಳಿಯಿರುವ ಟೆಲಿಕಾಂ ಲೇಔಟ್‌ನಲ್ಲಿ ಮಳೆಯಿಂದ ಜವಾಲವೃತವಾಗಿರುವ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.
ತಪಾಸಣೆ ವೇಳೆ ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್, ಕೆರೆಗಳ ವಿಭಾಗದ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಬಿಡಿಎ ಅಭಿಯಂತರ ಸದಸ್ಯ ಡಾ. ಎಚ್.ಆರ್. ಶಾಂತರಾಜಣ್ಣ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಉಪಸ್ಥಿತರಿದ್ದರು.