

ಬೆಂಗಳೂರು: ಬಿಬಿಎಂಪಿ ನೂತನ ಆಡಳಿತಾಧಿಕಾರಿಯಾಗಿ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಎಸ್.ಆರ್.ಉಮಾಶಂಕರ್, ತುಷಾರ್ ಗಿರಿನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹೊಸ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಕಾರಣದಿಂದ ತುಷಾರ್ ಗಿರಿನಾಥ್, ಮಹೇಶ್ವರ್ರಾವ್ಗೆ ನಾಡಪ್ರಭು ಕೆಂಪೇಗೌಡ ಪ್ರತಿಮೆ,ಕಚೇರಿಯ ಕೀ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಸುದ್ದಿಗೋಷ್ಠಿಯಲ್ಲಿ ತುಷಾರ್ ಗಿರಿನಾಥ್ ಮಾತನಾಡಿ, ಪಾಲಿಕೆಯ ಮುಖ್ಯ ಆಯುಕ್ತರಾಗಿ 3 ವರ್ಷ ಕಾರ್ಯನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿರುವ ಖುಷಿ ನನಗಿದೆ. ಆದರೂ, ಯಾವುದೇ ಹುದ್ದೆ ಬಿಡುವ ವೇಳೆ ಇನ್ನಷ್ಟು ಕೆಲಸ ಮಾಡಬೇಕು ಎನಿಸುತ್ತದೆ. ಪಾಲಿಕೆಯಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಇನ್ನಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಮಾಧ್ಯಮಗಳು ನಮ್ಮನ್ನು ಎಚ್ಚರಿಸಿವೆ. ನಮ್ಮ ಬಗ್ಗೆ ಟೀಕೆ ವ್ಯಕ್ತವಾದಗ ಇನ್ನಷ್ಟು ಎಚ್ಚರಗೊಂಡು ಕೆಲಸ ಮಾಡಿರುವುದುಂಟು ಎಂದರು.
ಪ್ರಜಾಪ್ರಭುತ್ವದಲ್ಲಿ ಜನರ ಕಷ್ಟ ಆಲಿಸುವುದು ನಮ್ಮ ಕರ್ತವ್ಯ. ಕೆಲ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಜನರ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಬೇಸರ ಸಹ ಆಗಿದೆ. ಸರ್ಕಾರವು ಪಾಲಿಕೆಯ ವಿವಿಧ ಹುದ್ದೆಗಳಲ್ಲಿ 13 ಐಎಎಸ್ ಅಧಿಕಾರಿಗಳನ್ನು ಒದಗಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಧಿಕಾರಿಗಳ ಸಹಕಾರದಿಂದಲೂ ಒಳ್ಳೆಯ ಕೆಲಸ ಮಾಡಿದ್ದೇನೆ. 3 ವರ್ಷ ಬಳಿಕ ನನ್ನ ಮಿತ್ರರಾದ ಮಹೇಶ್ವರ್ರಾವ್ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಟೀಕೆ ಮತ್ತು ಟಿಪ್ಪಣಿಯನ್ನು ಅವರು ಸಕಾರಾತ್ಮಕವಾಗಿ ತೆಗೆದುಕೊಂಡು ಅತಿ ಸಕ್ರಿಯವಾಗಿ ಕೆಲಸ ಮಾಡುತ್ತಾರೆ ಎಂದು ತುಷಾರ್ ಗಿರಿನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂದ ಅಧ್ಯಕ್ಷ ಎ.ಅಮೃತ್ರಾಜ್ ನೇತೃತ್ವದಲ್ಲಿ ವಿವಿಧ ಪದಾಧಿಕಾರಿಗಳು, ತುಷಾರ್ ಗಿರಿನಾಥ್, ಮಹೇಶ್ವರ ರಾವ್ಗೆ ಹೂಗುಚ್ಛ ನೀಡಿ ಶುಭ ಕೋರಿದರು. ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತ ಕರೀಗೌಡ, ಪಾಲಿಕೆ ಮುಖ್ಯ ಅಭಿಯಂತರ ಪ್ರಹ್ಲಾದ್ ಸೇರಿ ಮತ್ತಿತರರಿದ್ದರು,
ಬಿಬಿಎಂಪಿಯಲ್ಲಿ ಉತ್ತಮ ಕೆಲಸ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದೇನೆ.,ತುಷಾರ್ ಗಿರಿನಾಥ್ ಮಾರ್ಗದರ್ಶನ ಆಧಾರದಲ್ಲಿ ನಾನು ಕೆಲಸ ಮಾಡುತ್ತೇನೆ. 3 ವರ್ಷದಲ್ಲಿ ಬ್ರ್ಯಾಂಡ್ ಬೆಂಗಳೂರು ಸೇರಿ ಸಾಕಷ್ಟು ಕಾರ್ಯಗಳನ್ನು ಅವರು ಮಾಡಿದ್ದಾರೆ. ಪಾಲಿಕೆಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳನ್ನು ಮುಂದುವರಿಸುತ್ತೇನೆ.
| ಮಹೇಶ್ವರರಾವ್, ಬಿಬಿಎಂಪಿ ಮುಖ್ಯ ಆಯುಕ್ತ.