

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಗುರುತಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತಗತಿಯಲ್ಲಿ ಗುರುತಿನ ಚೀಟಿ ವಿತರಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಎಂಟೂ ವಲಯಗಳಲ್ಲಿ ಅಂದಾಜು 27 ಸಾವಿರ ಸಂಖ್ಯೆಯಷ್ಟು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಇವರೆಲ್ಲರಿಗೂ ಬೇಗನೆ ಗುರುತಿನ ಚೀಟಿಗಳನ್ನು ವಿತರಿಸಬೇಕು ಎಂದರು.
ಗುರುತಿನ ಚೀಟಿ ಯಾವ ಮಾದರಿಯಲ್ಲಿ ಇರಬೇಕು ಎಂಬುದನ್ನು ಅಂತಿಮಗೊಳಿಸಿ, ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೂ ನೀಡಬೇಕು. ನಂತರ ಗುರುತಿಸಿರುವಂತಹ ವ್ಯಾಪಾರ ವಲಯಗಳಲ್ಲಿ, ವಹಿವಾಟು ನಡೆಸಲು ಅನುವು ಮಾಡಿಕೊಡಬೇಕು ಎಂದರು.
ಸಮೀಕ್ಷೆ ತ್ವರಿತಗೊಳಿಸಿ:
ಪಾಲಿಕೆಯ ವಲಯವಾರು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಈ ಪೈಕಿ ಆಯಾ ವಲಯ ವ್ಯಾಪ್ತಿಯಲ್ಲಿ ಮಕ್ಕಳ ಸರ್ವೆ ಕಾರ್ಯ ನಡೆಸುವುದರ ಜತೆಗೆ ತ್ವರಿತಗತಿಯಲ್ಲಿ ಗುರುತಿಸುವ ಕಾರ್ಯಕೈಗೊಳ್ಳಬೇಕು. ಕಲ್ಯಾಣ ವಿಭಾಗದಡಿ ವಿವಿಧ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಪೈಕಿ ಯಾವ್ಯಾವ ಕಾರ್ಯಕ್ರಮಗಳಿಗೆ ಎಷ್ಟು ಅರ್ಜಿ ಬಂದಿವೆ ಎಂಬುದನ್ನು ವಲಯವಾರು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.
ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ಪ್ರಧಾನ ಅಭಿಯಂತರ ಪ್ರಹ್ಲಾದ್ ಹಾಜರಿದ್ದರು.