

ಬೆಂಗಳೂರು: ನಗರ ವ್ಯಾಪ್ತಿಯ ಆರ್ಟಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆ ಮುಂಜಾಗ್ರತಾ ಕ್ರಮ, ರಸ್ತೆಗುಂಡಿ ಮುಚ್ಚುವುದು ಸೇರಿ ಇನ್ನಿತರ ವಿಷಯಗಳ ಕುರಿತು ವೀಡಿಯೋ ಸಂವಾದದ ಮೂಲಕ ಗುರುವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ರಸ್ತೆಗುಂಡಿಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಮುಚ್ಚಬೇಕೆಂದು ಸೂಚಿಸಿದರು.
ಪಾಲಿಕೆ ವ್ಯಾಪ್ತಿಯ 8 ವಲಯಗಳ ವಲಯ ಆಯುಕ್ತರು ರಸ್ತೆಗುಂಡಿಗಳು ಬಿದ್ದಿರುವದನ್ನು ಪರಿಶೀಲಿಸಿ ಕೂಡಲೆ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಸರಿಯಾಗಿ ಡಾಂಬರು ಮಿಶ್ರಣ ವ್ಯವಸ್ಥೆ ಮಾಡುವ ಏಜೆನ್ಸಿಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಎಷ್ಟು ಡಾಂಬರು ಅವಶ್ಯಕತೆಯಿದೆ ಎಂಬುದನ್ನು ಏಜೆನ್ಸಿಗಳಿಗೆ ತಿಳಿಸಿ ಅವಶ್ಯಕ ಡಾಂಬರು ಪಡೆದು ಕೂಡಲೆ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ರಾಜಕಾಲುವೆಗಳಲ್ಲಿ ಸ್ವಚ್ಛತೆ ಕಾಪಾಡಿ:
ನಗರದಲ್ಲಿ ಬರುವ ಪ್ರಥಮ ಹಾಗೂ ದ್ವಿತೀಯ ರಾಜಕಾಲುವೆಗಳಲ್ಲಿ ಹೂಳೆತ್ತುವ ಮೂಲಕ ಸ್ವಚ್ಛತೆ ಕಾಪಾಡಿ ಎಲ್ಲಿಯೂ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಾಜಕಾಲುವೆಯಿಂದ ಹೊರಹಾಕಿದ ಹೂಳನ್ನು ಅಲ್ಲಿಯೇ ಬಿಡದೆ ಕೂಡಲೆ ತೆರವುಗೊಳಿಸಬೇಕು. ಜತೆಗೆ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಬ್ಲಾಕ್ ಸ್ಪಾಟ್ಸ್ ತೆರವುಗೊಳಿಸಿ:
ನಗರದ ರಸ್ತೆ ಬದಿಗಳಲ್ಲಿ ಸಾಕಷ್ಟು ಕಡೆ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳಿದ್ದು, ಘನತ್ಯಾಜ್ಯ ವಿಭಾಗವು ಕೂಡಲೆ ಎಲ್ಲ ಕಡೆ ಕಸ ಸುರಿಯುವ ಸ್ಥಳಗಲ್ಲಿ ಸ್ವಚ್ಛತೆ ಮಾಡಿ ಅಲ್ಲಿ ಮತ್ತೆ ಕಸ ಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರು ಸೂಚಿಸಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ವಿಪತ್ತು ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಎಲ್ಲ ವಲಯಗಳ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಪಾಲ್ಗೊಂಡಿದ್ದರು.
ಪ್ರವಾಹ ಪೀಡಿತ ಪ್ರದೇಶಗಳ ಬಳಿ ನಿಗಾವಹಿಸಿ:
ನಗರದಲ್ಲಿ 198 ಪ್ರವಾಹ ಪೀಡಿದ ಪ್ರದೇಶಗಳ ಪೈಕಿ ಈಗಾಗಲೇ 124 ಕಡೆ ಯಾವುದೇ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಉಳಿದ 74 ಸ್ಥಳಗಳ ಪೈಕಿ 24ರಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಿದ್ದು, ಉಳಿದ 50 ಸ್ಥಳಗಳಲ್ಲಿ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.