

ಸುಭಾಸ ಧೂಪದಹೊಂಡ ಕಾರವಾರ
ಆಲಿವ್ ರೆಡ್ಲಿ ಕಡಲ ಆಮೆಗಳ ರಕ್ಷಣೆ ಹಾಗೂ ಅವುಗಳ ಅಧ್ಯಯನದ ತಾಣವಾಗಿ ಕಾರವಾರ ಶೀಘ್ರದಲ್ಲಿ ರೂಪುಗೊಳ್ಳಲಿದೆ. ವಿಶ್ವ ಬ್ಯಾಂಕ್ ನೆರವಿನ ಕೆ-ಶೋರ್ ಯೋಜನೆಯಡಿ ಮರೈ ಮೆಗಾ ಫೌನಾ ರೆಸ್ಕ್ಯೂ ಆ್ಯಂಡ್ ರಿ ಹ್ಯಾಬಿಲಿಟೇಶನ್ ಸೆಂಟರ್ ಸ್ಥಾಪನೆಗೆ ಕಾರವಾರ ಅರಣ್ಯ ವಿಭಾಗವು ಯೋಜಿಸಿದ್ದು, ಅದಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕಾರವಾರದಲ್ಲಿ ಆಮೆ ಪ್ರವಾಸೋದ್ಯಮದ ಒಂದು ವಿಶಿಷ್ಟ ಹೆಜ್ಜೆಯನ್ನು ಇಡಲಾಗುತ್ತಿದೆ.
ಆಲಿವ್ ರೆಡ್ಲಿ ಎಂಬ ಅಳಿವಿನಂಚಿನಲ್ಲಿರುವ ಆಮೆಗಳು ಕಾರವಾರದಿಂದ ಹೊನ್ನಾವರದವರೆಗ ಕಡಲ ತೀರದಲ್ಲಿ ಬಂದು ಮೊಟ್ಟೆ ಇಡುವುದು ಗೊತ್ತೇ ಇದೆ. ಕೆಲ ವರ್ಷಗಳ ಹಿಂದೆ ಅವುಗಳ ರಕ್ಷಣೆಗಾಗಿ ಕಾರವಾರ ಅರಣ್ಯ ವಿಭಾಗದಲ್ಲಿ ಮರೈನ್ ಆ್ಯಂಡ್ ಇಕೋ ಸಿಸ್ಟಂ ಸೆಲ್ ತೆರೆಯಲಾಗಿತ್ತು. ಈ ಆಮೆ ಮೊಟ್ಟೆಗಳನ್ನು ಕಾಪಿಟ್ಟು, ಮರಿ ಮಾಡಿ ಕಡಲಿಗೆ ಬಿಡುವ ಕಾರ್ಯವನ್ನು ಅರಣ್ಯ ಇಲಾಖೆ ಈಗ ಮಾಡುತ್ತಿದೆ. ಈಗ ಕಡಲ ಆಮೆಗಳ ಅಧ್ಯಯನಕ್ಕೆ ಕಾರವಾರ ವಿಭಾಗದಿಂದ ಕ್ರಮ ವಹಿಸಲಾಗುತ್ತಿದೆ. ಸುಮಾರು 4 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಅಂದುಕೊಂಡಂತೆ ಡಿಪಿಆರ್‌ಗೆ ಅನುಮತಿ ದೊರೆತರೆ ಇದೇ ಡಿಸೆಂಬರ್ ಹೊತ್ತಿಗೆ ಕೆಲಸ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಕಾರವಾರ ವಿಭಾಗದ ಡಿಎಫ್‌ಒ ಸಿ. ರವಿಶಂಕರ್ ವಿಜಯವಾಣಿಗೆ ತಿಳಿಸಿದ್ದಾರೆ.
ಕಾರವಾರದ ಕೋಡಿಬಾಗದ ಟ್ರೀ ಪಾರ್ಕ್‌ನಲ್ಲಿ ಸಿಆರ್‌ಜಡ್ ವ್ಯಾಪ್ತಿಯ ಹೊರಗೆ ಈ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಲ್ಲಿ ಆಲಿವ್ ರೆಡ್ಲಿ ಆಮೆಗಳ ಬಗ್ಗೆ ಮಾಹಿತಿ ಕೇಂದ್ರ, ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಅಲ್ಲದೆ, ಅವುಗಳ ಅಧ್ಯಯನಕ್ಕೆ ಕೇಂದ್ರವನ್ನು ತೆರೆಯಲಾಗುವುದು. ಇಲ್ಲಿ ಮರಿ ಮಾಡಿ ಬಿಟ್ಟ ಆಮೆಗಳು ಅರಬ್ಬಿ ಸಮುದ್ರದಲ್ಲಿ ಎಷ್ಟು ದೂರ ಕ್ರಮಿಸುತ್ತವೆ. ಅವು ಹೇಗೆ ವಾಪಸ್ ಇದೇ ಸ್ಥಳಕ್ಕೆ ಮೊಟ್ಟೆ ಇಡಲು ಬರುತ್ತವೆ ಎಂಬ ಕುತೂಹಲಕಾರಿ ಅಂಶಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ. ಮಾತ್ರವಲ್ಲ ಆಮೆಗಳು ತಿಮಿಂಗಿಲಗಳಿಂದ ಏಟಾಗಿ ಬಂದರೆ ಅವುಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡುವ ಪುನರ್ವಸತಿ ಕೇಂದ್ರಗಳನ್ನೂ ತೆರೆಯಲಾಗುತ್ತಿದೆ. ಸಮುದ್ರ ಜೀವಿಗಳಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆಲಿವ್ ರೆಡ್ಲಿ ಆಮೆಗಳು ಪರಿಸರ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಆಮೆಗಳಾಗಿವೆ. ಅವುಗಳ ಮೊಟ್ಟೆಗಳನ್ನು ಕೆಲವು ಪ್ರದೇಶಗಳಲ್ಲಿ ತಿನ್ನಲಾಗುತ್ತದೆ. ಅಲ್ಲದೆ, ಪ್ರಾಣಿಗಳಿಗೂ ಆಮೆ ಮೊಟ್ಟೆ ಅಚ್ಚುಮೆಚ್ಚು. ಸಮುದ್ರ ದಡಕ್ಕೆ ಬಂದು ಆಮೆಗಳು ಇಡುವ ಮೊಟ್ಟೆಗಳಲ್ಲಿ ಹೆಚ್ಚಿನವು ನಾಶವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಇವುಗಳು ಸಮುದ್ರದ ಜೀವನ ಚಕ್ರದ ಪ್ರಮುಖ ಭಾಗವಾಗಿವೆ. ಈ ವಿಶಿಷ್ಟ ಆಮೆಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ಬರುವ ಮಾರ್ಚ್ ಹೋತ್ತಿಗೆ ಈ ಕೇಂದ್ರವು ಕಾರವಾರದಲ್ಲಿ ಪ್ರಾರಂಭವಾಗಲಿದೆ.ಸಿ.ರವಿಶಂಕರ್, ಡಿಎಫ್‌ಒ, ಕಾರವಾರ