

- ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅಭಿಮತ
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಉತ್ತಮ ಪ್ರವಾಸಿ ತಾಣಗಳಿವೆ. ಆದರೆ, ಅವುಗಳಿಗೆ ಪ್ರಚಾರ ಒದಗಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಂಥ ಪ್ರವಾಸಿ ತಾಣಗಳಿಗೆ ಪ್ರಚಾರ ಕೊಡಬೇಕಿದೆ’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ವಿ.ರಾಜೇಂದ್ರ ಹೇಳಿದರು.
ಇಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆದಾರರೊಂದಿಗೆ ಸಂವಾದ (ಕನೆಕ್ಟ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸವದತ್ತಿಯ ಯಲ್ಲಮ್ಮ ದೇವಸ್ಥಾನ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಶ್ರೀಕ್ಷೇತ್ರ ಸೊಗಲ, ರಾಜಹಂಸಗಡ ಕೋಟೆ, ಚನ್ನಮ್ಮನ ಕಿತ್ತೂರು ಕೋಟೆ ಮೊದಲಾದ ಪ್ರವಾಸಿತಾಣಗಳು ಜಿಲ್ಲೆಯಲ್ಲಿವೆ. ಖಾನಾಪುರ ತಾಲ್ಲೂಕು ದಟ್ಟವಾದ ಅರಣ್ಯದಿಂದ ಸುತ್ತುವರಿದಿದೆ. ನಮ್ಮ ನೆಲದ ನೈಸರ್ಗಿಕ ಸೌಂದರ್ಯವನ್ನು ಇಡೀ ನಾಡಿಗೆ ತೋರಿಸುವ ಕೆಲಸವಾಗಬೇಕಿದೆ. ಗ್ರಾಮೀಣ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಿದೆ’ ಎಂದರು.
‘ಕೈಗಾರಿಕೆ ದೃಷ್ಟಿಯಿಂದಲೂ ಬೆಳಗಾವಿ ಮುಂದಿದೆ. ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿ ಇಲ್ಲಿಯೇ ಹಾಯ್ದುಹೋಗಿದ್ದು, ವಿಮಾನ ಸೌಕರ್ಯವನ್ನೂ ಹೊಂದಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನವೂ ಇಲ್ಲಿ ನಡೆಯುತ್ತದೆ. ಇವೆಲ್ಲ ಅವಕಾಶ ಸದ್ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.