ಗಗನಕ್ಕೇರಿದ್ದ ತೊಗರಿ ಪ್ರಪಾತಕ್ಕೆ: ಕಾಳಸಂತೆಕೋರರ ಕೈಚಳಕದ ಶಂಕೆ, ಮರೆಯಾದ ದರ ಹೆಚ್ಚಳದ ಖುಷಿ

Tur Dal
Published on

| ಜಯತೀರ್ಥ ಪಾಟೀಲ ಕಲಬುರಗಿ

ಮಾರುಕಟ್ಟೆಯಲ್ಲಿ ತೊಗರಿ ಬೆಲೆ ದಿಢೀರ್ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದು, ಚಿನ್ನದ ದರದ ಖುಷಿಯಲ್ಲಿದ್ದ ರೈತರು ಈಗ ನಿರಾಸೆಯ ಮಡುವಿಗೆ ಬಿದ್ದಿದ್ದಾರೆ. ಬೆಲೆ ಹೊಯ್ದಾಟದಲ್ಲಿ ಕಾಳಸಂತೆಕೋರರ ಕೈವಾಡವಿರುವ ಸಂದೇಹವಿದ್ದು, ಹೆಚ್ಚಿನ ಲಾಭ ಪಡೆಯುವ ದುರಾಲೋಚನೆಯಲ್ಲಿ ‘ಕೃತಕ ದರ ಕುಸಿತ‘ ಸೃಷ್ಟಿಸಿ ದಾಸ್ತಾನು ಹೆಚ್ಚಿಸಿಕೊಳ್ಳಲು ಹವಣಿಸಿರುವ ಗುಮಾನಿಯಿದೆ.

ಕಲಬುರಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 12ರಿಂದ 14 ಸಾವಿರ ರೂ. ಗಡಿ ದಾಟಿದ್ದ ತೊಗರಿ ಧಾರಣೆ ಏಕಾಏಕಿ 8000-8500 ರೂ. ಗೆ ಇಳಿದು, ರೈತರನ್ನು ದಿಕ್ಕು ತೋಚದಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರ ಮಧ್ಯೆಪ್ರವೇಶಿಸಬೇಕು. ಆದರೆ, ಬೆಂಬಲ ಬೆಲೆಗೆ ಖರೀದಿ ಕೇಂದ್ರ ತೆರೆಯುವುದಕ್ಕಿಂತ ಬೇರೆ ವಿಷಯಗಳಲ್ಲಿ ಮಗ್ನವಾಗಿದೆ. ಪ್ರತಿವರ್ಷ ತೊಗರಿ ಖರೀದಿಗೆ ಡಿಸೆಂಬರ್​ನಲ್ಲಿ ನೋಂದಣಿ, ಜನವರಿ ಮೊದಲ ವಾರ ಖರೀದಿ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೀಗ ಖರೀದಿ ಕೇಂದ್ರ ಆರಂಭಿಸುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಬರದ ಬವಣೆಗೆ ಸಿಲುಕಿರುವ ಅನ್ನದಾತ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾನೆ. ಕಳೆದ ಜನವರಿಯಲ್ಲಿ ರಾಶಿಯಾದ ಸಂದರ್ಭದಲ್ಲಿ ಕ್ವಿಂಟಾಲ್​ಗೆ 6,500 ರೂ. ದರದಲ್ಲಿ ತೊಗರಿ ಮಾರಾಟವಾಗಿದೆ.

ಆರು ತಿಂಗಳಲ್ಲೇ ದಾಖಲೆ ದರ ಏರಿಕೆಯಾಗಿ ಅಚ್ಚರಿ ಮೂಡಿಸಿತ್ತು. ಅಷ್ಟೇ ಶೀಘ್ರವಾಗಿ ಬೆಲೆಯಲ್ಲಿ ಕುಸಿತ ಕಂಡು ಮತ್ತೆ ಸಂಕಟಕ್ಕೆ ದೂಡಿದೆ. ವಾಡಿಕೆಯಂತೆ ಕಲಬುರಗಿ ಜಿಲ್ಲೆಯೊಂದರಲ್ಲೇ 42-45 ಲಕ್ಷ ಟನ್ ತೊಗರಿ ಇಳುವರಿ ಬರುತ್ತದೆ. ಆದರೆ, ಕಳೆದ ವರ್ಷ ಅತಿವೃಷ್ಟಿ, ನೆಟೆರೋಗದಿಂದ ಬೆಳೆ ಸಂಪೂರ್ಣ ಹಾನಿಗೀಡಾಗಿ ಕೇವಲ 20 ಲಕ್ಷ ಟನ್ ಇಳುವರಿ ಬಂದಿತ್ತು. ಈ ಸಲವೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮಳೆ ಕೈಕೊಟ್ಟು ಬರ ಆವರಿಸಿದ್ದರಿಂದ ಕಳೆದ ಬಾರಿಗಿಂತ ಈಗ ಇಳುವರಿ ಇನ್ನಷ್ಟು ಕಮ್ಮಿಯಾಗುವ ಸಾಧ್ಯತೆ ಇದೆ. ತೊಗರಿ ಕಟಾವು ಪ್ರಕ್ರಿಯೆ ಜನವರಿ ಅಂತ್ಯದವರೆಗೂ ನಡೆಯಲಿದೆ.

ಮಾರುಕಟ್ಟೆಯಲ್ಲಿ ತೊಗರಿ ಬೆಲೆ 12 ಸಾವಿರ ರೂ. ಗಡಿ ದಾಟಿ ಇದೀಗ ದಿಢೀರ್ ಕುಸಿದಿದ್ದು, ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಈವರೆಗೂ ಸರ್ಕಾರ ತೊಗರಿ ಖರೀದಿ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರ ಯಾವುದಿದ್ದರೂ ರೈತರ ಗೋಳು ತಪು್ಪತ್ತಿಲ್ಲ.

| ದೇವೀಂದ್ರಪ್ಪ ಆವಂಟಿ ತೊಗರಿ ಬೆಳೆಗಾರ

ಮಾರ್ಕೆಟ್ ದರದಲ್ಲಿ ಖರೀದಿ

ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ನಿಯಂತ್ರಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಲೆ ಸ್ಥಿರೀಕರಣ ಯೋಜನೆ ಜಾರಿಗೊಳಿಸಿದ್ದು, ಈ ಮೂಲಕ ಸರ್ಕಾರಗಳು ಮಾರುಕಟ್ಟೆ ದರದಲ್ಲೇ ಖರೀದಿಸುವ ಚಿಂತನೆ ನಡೆಸಿವೆ. ಕೇಂದ್ರದ ನಫೆಡ್ ಮತ್ತು ರಾಜ್ಯದ ಕರ್ನಾಟಕ ಕೃಷಿ ಸಹಕಾರ ಮಾರಾಟ ಮಂಡಳಿ ಮೂಲಕ ನೇರವಾಗಿ ರೈತರಿಂದ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್​ಗೆ 7 ಸಾವಿರ ರೂ. ಇದ್ದು, ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ 500 ರೂ. ನೀಡಿದರೆ 7500 ರೂ. ನಿಗದಿಯಾಗಲಿದೆ. ಆದರೀಗ ಮಾರುಕಟ್ಟೆ ದರ 8000-8500 ರೂ. ಇದೆ. ಈ ಬೆಲೆಯಲ್ಲಿ ಸರ್ಕಾರ ಖರೀದಿಗೆ ಮುಂದಾದರೆ ಮಾರುಕಟ್ಟೆಯಲ್ಲಿ ಸ್ಥಿರೀಕರಣ ಕಾಣಬಹುದಾಗಿದೆ.

ತೊಗರಿ ಕಟಾವು ಜನವರಿ ಅಂತ್ಯದವರೆಗೆ ನಡೆಯಲಿದೆ. ಬರದಿಂದಾಗಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮಾರುಕಟ್ಟೆ ದರದಲ್ಲೇ ಖರೀದಿಸಲು ಯೋಜಿಸಲಾಗಿದೆ. ಸರ್ಕಾರದ ಆದೇಶ 2-3 ದಿನದಲ್ಲಿ ಹೊರಬೀಳಲಿದೆ.

| ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ

ಬಿಸಿಯೂಟಕ್ಕೂ ಬೇಳೆ ಕೊಡಿ

ಮಧ್ಯಾಹ್ನದ ಬಿಸಿಯೂಟ ಸೇರಿ ಸರ್ಕಾರದ ಇತರ ಯೋಜನೆಗಳಡಿ ಸಿರಿಧಾನ್ಯ ಬಳಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ. ಇದೇ ರೀತಿ ಕಲ್ಯಾಣ ನಾಡಿನ ಪ್ರೊಟೀನ್​ಯುುಕ್ತ ತೊಗರಿ ಬೇಳೆಯನ್ನು ಈ ಯೋಜನೆಯಲ್ಲಿ ಬಳಕೆ ಮಾಡಿದರೆ ರೈತರಿಗೂ ಅನುಕೂಲವಾಗಲಿದೆ. ಆದರೆ, ಈ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ಅಚ್ಚರಿ ಮೂಡಿಸಿದೆ. ಈ ಬಾರಿಯಾದರೂ ಸರ್ಕಾರ ತೊಗರಿಯನ್ನು ಸರ್ಕಾರದ ಯೋಜನೆಗಳಿಗೆ ಬಳಸುವ ಸಂಕಲ್ಪ ಮಾಡಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಕಟ್ಟಡ, ರಸ್ತೆ ಅಭಿವೃದ್ಧಿ ಸೇರಿ ಬೇಳೆ ಉತ್ಪಾದನಾ ಘಟಕಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 3 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಅನುದಾನದಡಿ 4.50 ಕೋಟಿ ರೂ. ಬಿಡುಗಡೆಯಾಗಿದೆ. ಘಟಕದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರದಲ್ಲಿ ಪ್ರಾರಂಭವಾಗಲಿದೆ.

| ಎಂ.ಇ. ಅಂಥೋಣಿ ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಎಂಡಿ

ಇನ್ನಷ್ಟು ಇಳಿಕೆ ಸಾಧ್ಯತೆ

ಹುಬ್ಬಳ್ಳಿ: ವಾರದ ಹಿಂದೆ ಕೆಜಿ ತೊಗರಿ ಬೇಳೆಗೆ 160 ರೂ. ಆಸುಪಾಸಿನಲ್ಲಿದ್ದ ದರವೀಗ 120 ರೂಪಾಯಿಯಲ್ಲಿ ಸ್ಥಿರತೆ ಕಂಡಿದೆ. ಹೊಸದಾಗಿ ತೊಗರಿ ಬೇಳೆ ಆಗಮನ ಹಾಗೂ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಹೆಸರಲ್ಲಿ ತೊಗರಿ ಬೇಳೆ ವಿತರಿಸುತ್ತಿರುವುದು ಕೂಡ ದರ ಇಳಿಕೆಗೆ ಕಾರಣ ಎಂದು ಅಭಿಪ್ರಾಯಪಡುತ್ತಾರೆ ವ್ಯಾಪಾರಿಗಳು. ತಿಂಗಳ ಹಿಂದೆ ಕೆಜಿ ತೊಗರಿ ಬೆಲೆ 200 ರೂ.ವರೆಗೂ ತಲುಪಿತ್ತು. ಕ್ರಮೇಣ 160 ರೂ.ಗೆ ಬಂದು ನಿಂತಿತ್ತು. ಈಗ 120 ರೂ. ಬೆಲೆ ಇದೆ. ಸಗಟು ವ್ಯಾಪಾರದಲ್ಲಿ ಹೀಗಿದ್ದರೆ ಚಿಲ್ಲರೆ ಮಾರಾಟದಲ್ಲಿ ನಿಗದಿಗಿಂತ 5-6 ರೂ. ದರ ಹೆಚ್ಚಿರುತ್ತದೆ. 15 ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ಸೇವಕರಾಂ ಗ್ರೂಪ್ ಮಾಲೀಕ ಅರ್ಜುನ ಅಗರವಾಲ್.

ಬಿಡುಗಡೆಗೆ ಸೀಮಿತ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸ್ ಬ್ರ್ಯಾಂಡ್​ನ ತೊಗರಿ ಬೇಳೆ ಪ್ಯಾಕೆಟ್ ಬಿಡುಗಡೆ ಮಾಡಲಾಯಿತು. ಈಗಿನ ಸರ್ಕಾರದ ಅವಧಿಯಲ್ಲೂ ಮತ್ತೊಮ್ಮೆ ಬಿಡುಗಡೆ ಆಗಿದ್ದೇ ಸಾಧನೆ ಎನ್ನಬಹುದಾಗಿದೆ. ತೊಗರಿ ಸಂಸ್ಕರಣೆ ಮಾಡುತ್ತಿಲ್ಲ, ಸಂಸ್ಕರಣಾ ಯಂತ್ರವೂ ಇಲ್ಲದಿರುವುದು ವಿಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net