ಟನಲ್ ಯೋಜನೆ: ಕಾಶ್ಮೀರದಲ್ಲಿ ಅಧ್ಯಯನ: ಬಿಬಿಎಂಪಿ ಇಂಜಿನಿಯರ್ ತಂಡ ರೆಡಿ

tunnel project
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸುರಂಗ ರಸ್ತೆ ನಿರ್ಮಿಸುವ ಹಿನ್ನೆಲೆಯಲ್ಲಿ, ಬಿಬಿಎಂಪಿ ಇಂಜಿನಿಯರ್‌ಗಳ ತಂಡ ಶೀಘ್ರವೇ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಟನಲ್ ರಸ್ತೆಗಳನ್ನು ಅಧ್ಯಯನ ನಡೆಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 5-6 ಟನಲ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಹೆಚ್ಚಿನ ಯೋಜನೆಗಳನ್ನು ಎನ್‌ಎಚ್‌ಎಐ ಮತ್ತು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸಹಕಾರದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಅಲ್ಲಿನ ಪರ್ವವತ ಶ್ರೇಣಿಯ ಕಡಿದಾದ ಜಾಗದಲ್ಲಿ ಸುರಂಗವನ್ನು ಕೊರೆಯಲು ಬಹಳ ಪ್ರಯಾಸಪಟ್ಟು ರಸ್ತೆ ಮಾಡಲಾಗಿದೆ. ಜತೆಗೆ ಸರ್ವಋತು ಹೆದ್ದಾರಿ ಆಗಿರುವ ಕಾರಣಬನಿಹಾಲ್ ಖಾಜಿಗುಂಡ್ ಟನಲ್, ಜೋಜಿಲಾ ಪಾಸ್ ಸುರಂಗಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ. ಕಳೆದ ಜನವರಿಯಲ್ಲಿ ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಿರುವ ಸೋನಾಮಾರ್ಗ್ ಟ್ವಿನ್ ಟನಲ್ ಯೋಜನೆಯನ್ನು ವಿಶ್ವ ದರ್ಜೆಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.

ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮುನ್ನ ತಾಂತ್ರಿಕ ಮಾಹಿತಿ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ. ಸದ್ಯ ನಗರದಲ್ಲಿ ಮೆಟ್ರೋ ರೈಲಿಗಾಗಿ ಸುರಂಗ ಕೊರೆದಿದ್ದರೂ, ರಸ್ತೆ ಟನಲ್ ವಿಸ್ತಾರ 2-3 ಪಟ್ಟು ಹೆಚ್ಚಿರಲಿದೆ. ಸುರಂಗ ಕೊರೆಯಲು ಬೃಹತ್ ಯಂತ್ರವನ್ನು ವಿದೇಶದಿಂದ ತರಿಸಬೇಕಾಗುತ್ತದೆ. ಕಾಮಗಾರಿ ನಿರಂತರವಾಗಿ ನಡೆಯುವ ಜತೆಗೆ ಕೊರೆಯುವ ಯಂತ್ರದ ಕಾರ್ಯಕ್ಷಮತೆ, ಕೆಲಸಗಾರರ ಸುರಕ್ಷತೆ ಇತ್ಯಾದಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾಗಿ ಈಗಾಗಲೇ ಜಾರಿಗೆ ಬಂದಿರುವ ಟನಲ್ ಯೋಜನೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿಗಷ್ಟೇ ಈ ತಂಡವು ಆಂಧ್ರದ ವಿಶಾಖಪಟ್ಟಣಕ್ಕೆ ತೆರಳಿ ಅಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸಿರುವ ಟನಲ್ ರಸ್ತೆಯನ್ನು ವೀಕ್ಷಿಸಿ ವಾಪಸಾಗಿದೆ. ಚೆನ್ನೈ-ನಸ್ರೀ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬರುವ ಸುರಂಗ ರಸ್ತೆಯಲ್ಲಿ ಬಳಸಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕಾಶ್ಮೀರದ ಟನಲ್‌ಗಳ ಬಗ್ಗೆ ಮಾಹಿತಿ ಪಡೆದು ಬಂದ ನಂತರ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಚರ್ಚೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷಾಂತ್ಯದೊಳಗೆ ಶಂಕುಸ್ಥಾಪನೆ?:

ಬೆಂಗಳೂರಿನಲ್ಲಿ ನಿರ್ಮಿಸಲಾಗುವ 22 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಟನಲ್ ಕಾರಿಡಾರ್‌ಗೆ (ಹೆಬ್ಬಾಳದ ಕೆರೆ ಕೋಡಿಯಿಂದ ಸಿಲ್ಕ್ ಬೋರ್ಡ್‌ವರೆಗೆ) 16,475 ಕೋಟಿ ರೂ. ವೆಚ್ಚವಾಗಲಿದೆ. ಕಾಮಗಾರಿಯನ್ನು ಎರಡು ಪ್ಯಾಕೇಜ್‌ನಲ್ಲಿ ಕೈಗೆತ್ತಿಕೊಳ್ಳಲು ಈ ತಿಂಗಳ 5ರಂದು ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಒಪ್ಪಿಗೆ ನೀಡಿದೆ. ಈಗಾಗಲೇ ಡಿಪಿಆರ್ ಸಿದ್ಧಗೊಂಡಿರುವುದರಿಂದ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲು ಪ್ರಯತ್ನ ಸಾಗಿದೆ. ಈ ವರ್ಷಾಂತ್ಯಕ್ಕೆ ಮುನ್ನ ಸುರಂಗ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಕೈಗೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net