

ಚನ್ನಗಿರಿ: ಮನಸ್ಸಿನಲ್ಲಿನಲ್ಲಿರುವ ದ್ವೇಷ, ಅಸೂಯೆಗಳನ್ನು ದೂರ ಮಾಡಿ, ಒಳ್ಳೆಯ ಕಾರ್ಯ ಮಾಡಿದವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಹೊಸದುರ್ಗ ಸಾಣೇಹಳ್ಳಿ ಪೀಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ತಾಲೂಕಿನ ತಾವರಕೆರೆ ಗ್ರಾಮದಲ್ಲಿ ಬುಧವಾರ ಎರಡನೇ ದಿನದ ನಮ್ಮ ನಡೆ ಸವೋದಯದೆಡೆಗೆ ಪಾದಯಾತ್ರೆ ಅಜ್ಜಂಪುರದಿಂದ ತಾವರಕೆರೆಗೆ ತಲುಪಿತು. ಅಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉತ್ತಮ ವಿಷಯವನ್ನು ಮನಸ್ಸಿನ ಆಳಕ್ಕೆ ಇರಿಸಿಕೊಂಡು ಕಾರ್ಯೂನ್ಮುಖರಾಗಬೇಕು. ಪಾದಯಾತ್ರೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಸವೋದಯದ ಅಂಶಗಳನ್ನು ಕಾರ್ಯಗತಗೊಳಿಸಿಕೊಂಡರೆ ಮಾತ್ರ ಪಾದಯಾತ್ರೆ ಸಾರ್ಥಕತೆ ಪಡೆಯತ್ತದೆ ಎಂದರು.
ಶೇ. 90 ರಷ್ಟು ಜನರು ಕೃಷಿಯನ್ನು ನಂಬಿ ಜೀವನ ಕಟ್ಟಿಕೊಂಡರೂ ಬೇಕಾದ ತರಕಾರಿಗಳನ್ನು ಕೊಂಡು ಊಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದೇವೆ. ಸಾವಯವ ಕೃಷಿಯಿಂದ ತರಕಾರಿ ಬೆಳೆದು ಊಟ ಮಾಡಿದರೆ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದು. ಧ್ಯಾನ, ನೈತಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಶಿಕ್ಷಣದಲ್ಲಿ ನೈತಿಕ ನೆಲೆಗಟ್ಟು ಇಲ್ಲದಂತಾಗಿದೆ. ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಬೇಕು. ರಾಜಕೀಯ ಕ್ಷೇತ್ರ ಸಮಾಜವನ್ನು ದಿಕ್ಕು ತಪ್ಪಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಪ್ರಸ್ತುತ ಪ್ರತಿಯೊಂದು ಕ್ಷೇತ್ರಗಳಲ್ಲಿ ಕಲಬೆರಕೆ ಹೆಚ್ಚಾಗಿದೆ. ಎಲ್ಲರೂ ಜಾಗೃತರಾಗಬೇಕಾಗಿದೆ ಎಂದರು.
ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಸ್ವಾಮಿ ಮಾತನಾಡಿ, ಇಂದಿನ ಯುವ ಪೀಳಿಗೆ ಸವೋದಯ ಕಡೆಗೆ ಬರಬೇಕಾಗಿದೆ. ಸವೋದಯದ ಯಾತ್ರೆಯ ಕಲ್ಪನೆ ಅತ್ಯದ್ಭುತವಾದುದು. ಜ್ಞಾನದ ಗಾಳಿ ಬಂದಾಗ ತೂರಿಕೊಳ್ಳಬೇಕು. ಅಂತೆಯೇ ಸವೋದಯದ ಗಾಳಿ ಬಂದಾಗ ತೂರಿಕೊಂಡಾಗ ಗುರಿ ಮುಟ್ಟಬಹುದು ಎಂದರು.
ಯುವಪೀಳಿಗೆ ಗುರಿ ಮತ್ತು ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಹಿರಿಯರ ಕೈಯಲ್ಲಿದೆ. ಅಸೂಯೆ, ಹೊಟ್ಟೆಕಿಚ್ಚು ತಾಂಡವವಾಡುತ್ತಿದೆ. ಇಂತಹ ಕೆಟ್ಟ ಭಾವನೆಗಳನ್ನು ಬಿಟ್ಟಾಗ ಮನುಷ್ಯ ತನ್ನನ್ನು ತಾನು ತಿದ್ದಿಕೊಂಡಂತೆ. ಪಂಡಿತಾರಾಧ್ಯ ಶ್ರೀಗಳು ಜನಸಾಮಾನ್ಯರ ಬಾಗಿಲಿಗೆ ಬಂದು ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಬದುಕಿನ ನಡೆಯನ್ನು ಬದಲಾವಣೆ ಮಾಡಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕಿ ಸಾಹಿತಿ ಲೀಲಾಸಂಪಗಿ ಮಾತನಾಡಿ, ಪಂಡಿತಾರಾಧ್ಯ ಸ್ವಾಮಿಗಳು ಕ್ರಾಂತಿಕಾರಕ ಗುರುಗಳು. ಇಡೀ ಸಮಾಜ ಉಳಿತಿಗಾಗಿ ಶ್ರಮಿಸುತ್ತಿದ್ದಾರೆ. ಮಹಿಳೆಯರನ್ನು ಕೋಣೆಯಿಂದ ಮಹಾಕೋಣೆಗೆ ಬಸವಣ್ಣನವರು ತಂದರು. ಮಹಾಕೋಣೆಯಿಂದ ಸಂಸತ್ತಿನವರೆಗೆ ಹೆಣ್ಣನ್ನು ತಂದವರು ಬಾಬಾಸಾಹೇಬ ಅಂಬೇಡ್ಕರ್ ಎಂದರು.
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಮಾನವನ ಮೀತಿಮೀರಿದ ದುರಾಸೆ, ಕೊಳ್ಳುಬಾಕ ಸಂಸ್ಕೃತಿ ಜೀವ ಸಂಕುಲಕ್ಕೆ ಕುತ್ತು ತಂದಿದೆ. ಇದರಿಂದ ಹೊರಬರದಿದ್ದರೆ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಹದಗೆಟ್ಟು ಮನುಷ್ಯ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳಬೇಕಾಗುತ್ತದೆ ಎಂದರು.
ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಸ್ವಾಮಿಗಳು, ಮಂಡ್ಯ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮಿಗಳು, ಸಾಹಿತಿ ಡಾ. ಸಂಜೀವ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ, ಮಾಡಾಳ್ ಮಲ್ಲಿಕಾರ್ಜುನ, ವಡ್ನಾಳ್ ಜಗದೀಶ್ ಚಂದ್ರಶೇಖರ್, ಲಿಂಗರಾಜು, ಗಿರೀಶ್, ರಾಜಪ್ಪ, ಸವೋದಯ ಸಂಘಟಕ ಶಿವನಕೆರೆ ಬಸವಲಿಂಗಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.