

ಸಾಸ್ವೆಹಳ್ಳಿ: ಹೊನ್ನಾಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವವನ್ನು ತಾಲೂಕು ಆಡಳಿತದೊಂದಿಗೆ ಆಚರಿಸಲು ಸನ್ನದ್ಧರಾಗಿದ್ದೆವೆ ಎಂದು ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಭೈರನಹಳ್ಳಿ ಪಂಚಾಕ್ಷರಯ್ಯ ಹೇಳಿದರು.
ಮಾ.12 ರಂದು ನಡೆಯಲಿರುವ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಹೋಬಳಿಯ ಬೆನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ಹಾಗೂ ಪಂಚಾಚಾರ್ಯರ ಧ್ವಜವನ್ನು ವಿತರಿಸಿ ಮಾತನಾಡಿದರು.
ಈ ಬಾರಿ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದಿಂದ ಶ್ರೀಕನಕ ರಂಗಮಂದಿರದವರೆಗೆ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ, ರಾಂಪುರ ಮಠದ ಶಿವಕುಮಾರ ಸ್ವಾಮೀಜಿ ಸಮ್ಮುಖದಲ್ಲಿ ಗಜರಾಜನೊಂದಿಗೆ ರೇಣುಕಾಚಾರ್ಯರ ಮೂರ್ತಿ ಹಾಗೂ ಭಾವಚಿತ್ರವನ್ನು ವಿವಿಧ ಜನಪದ ಕಲಾಮೇಳದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ ಎಂದರು.
ಹೊನ್ನಾಳಿ ನಗರದ ಕನಕ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಪುರಸಭೆಯ ಅಧ್ಯಕ್ಷ ಎ.ಕೆ. ಮೈಲಪ್ಪ, ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ ಇತರರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸಮಾಜದ ಹಿರಿಯ ಮುಖಂಡ ಕೆ.ಎಂ. ಪರಮೇಶ್ವರಯ್ಯ, ಬೆನಕಹಳ್ಳಿ ಎಂ. ಬಸವರಾಜಯ್ಯ, ಕೆ.ಎಂ. ದಯಾನಂದಯ್ಯ, ಎ.ಜೆ. ಹೇಮಲತಾ, ನಾಗರಾಜಶಾಸ್ತ್ರೀ ವಿರಕ್ತಮಠ, ಎ.ಜೆ. ಸುನಂದಾ, ಎಂ.ಎಸ್. ಶಾಸ್ತ್ರೀಹೊಳೆಮಠ, ಎಂ.ಎನ್. ವಿಶ್ವರಾಧ್ಯ, ಹನುಮನಹಳ್ಳಿ ಲೋಕೇಶಯ್ಯ ಸೇರಿ ಇತರರಿದ್ದರು.