

ಗುತ್ತಲ: ತುಂಗಭದ್ರಾ ನದಿಯ ಅಬ್ಬರಕ್ಕೆ ಬೆಚ್ಚಿರುವ ವರದಾ ನದಿ, ಸಂಗಮ ಸ್ಥಳದ ಹಿಂದೆ ಸರಿಯುತ್ತಿರುವ ಪರಿಣಾಮ ಬೆಳವಿಗಿ, ಗಳಗನಾಥ ಗ್ರಾಮಗಳ ಜಮೀನುಗಳು ಜಲಾವೃತ ಆಗುತ್ತಿದ್ದು, ಸೋಮವಾರದ ವೇಳೆಗೆ ಶೇ. 50ಕ್ಕೂ ಅಧಿಕ ಜಮೀನುಗಳು ಜಲಾವೃತವಾಗುವ ಸಂಭವವಿದೆ.
ಕಳೆದ ಎರಡು ದಿನಗಳಿಂದ ತುಂಗಭದ್ರಾ ನದಿಯು ಮಳೆ ಹಾಗೂ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಭಾನುವಾರ ಸಂಜೆ ನದಿಯ ನೀರಿನ ಮಟ್ಟ 7.20 ಮೀಟರ್ ದಾಖಲಾಗಿದೆ. ಇನ್ನು ಕೇವಲ 20 ಸೆ.ಮೀ. ಹೆಚ್ಚಾದರೆ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಲಿದೆ. ಈಗಾಗಲೇ ಅನೇಕ ಜಮೀನುಗಳು ನೀರಿನಿಂದ ಆವೃತವಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.
ತುಂಗಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ತುಂಗಭದ್ರಾ ಹಾಗೂ ವರದಾ ನದಿಗಳ ಸಂಗಮ ಸ್ಥಳದ ಹತ್ತಿರವೇ ಇರುವ ಗುಯಿಲಗುಂದಿ ಗ್ರಾಮ ಮುಳುಗಡೆ ಭೀತಿಯಲ್ಲಿದೆ. ಈಗಾಗಲೇ ಗ್ರಾಮದ ಅನೇಕ ಜಮೀನುಗಳು ನೀರಿನಿಂದ ಕೂಡಿದೆ. ಗುಯಿಲಗುಂದಿ-ಮೇವುಂಡಿ ಮಾರ್ಗ ಮಧ್ಯೆ ಇರುವ ಹಳ್ಳವು ತುಂಬಿ ಹರಿಯುತ್ತಿದೆ. ನೀರಿನ ಮಟ್ಟ ಕೊಂಚ ಏರಿಕೆಯಾದರೆ ಈ ಮಾರ್ಗವೂ ಬಂದ್ ಆಗಲಿದೆ. ಈಗಾಗಲೇ ಇನ್ನೊಂದು ಮಾರ್ಗ ಬೆಳವಿಗಿ ಹತ್ತಿರದ ವರದಾ ಸೇತುವೆ ಮೇಲೆ ಭಾನುವಾರ ಬೆಳಗ್ಗೆ ನದಿ ನೀರು ಹರಿಯುತ್ತಿದ್ದು ಸೋಮವಾರ ಈ ಸಂರ್ಪಕವೂ ಕಡಿತವಾಗುವ ಸಾಧ್ಯತೆ ಇದೆ. ವರದಾ ನದಿಯು ಸಂಗಮ ಸ್ಥಳದಲ್ಲಿ ಮಂದಗತಿಯಲ್ಲಿ ತುಂಗಭದ್ರೆಯನ್ನು ಸೇರುತ್ತಿರುವ ಕಾರಣ ಹಾಲಗಿ-ಮರೋಳ ಗ್ರಾಮದವರೆಗೆ ಸುಮಾರು 12ರಿಂದ 15 ಕಿ.ಮೀ. ಉದ್ದಕ್ಕೂ ನದಿಯು ಅಪಾಯ ಉಂಟು ಮಾಡಲಿದೆ.
ಉಳಿದಂತೆ ಗಳಗನಾಥ, ಹುರಳಿಹಾಳ, ಹಾವನೂರ, ಹಾವಂಶಿ-ಶಾಕಾರ, ಹರಳಹಳ್ಳಿ, ಕಂಚಾರಗಟ್ಟಿ ಹಾಗೂ ನರಶಿಪುರ ಗ್ರಾಮಗಳ ಸಾವಿರಾರು ಎಕರೆ ಪ್ರದೇಶಕ್ಕೆ ಈಗಾಗಲೇ ತುಂಗಭದ್ರಾ ನದಿಯು ಅಪಾಯ ತಂದಿದ್ದು, ನದಿಯ ನೀರು ಬೆಳೆಗಳನ್ನು ಆವರಿಸಿರುವುದನ್ನು ಕಂಡ ರೈತರು ಕಣ್ಣೀರಿಡುತ್ತಿದ್ದಾರೆ.
ಬೆಳವಿಗಿ ಗ್ರಾಮದ ವರದಾ ಸೇತುವೆ ಮೇಲೆ ಪ್ರವಾಹದ ನೀರು ರಭಸದಿಂದ ಹರಿಯುತ್ತಿದ್ದು ಭದ್ರತೆ ಇಲ್ಲದ ಜನರು (ವಿಶೇಷವಾಗಿ ಶಾಲಾ ಮಕ್ಕಳು) ಅಪಾಯವನ್ನು ಲೆಕ್ಕಿಸದೆ ಸಂಚರಿಸುತ್ತಿದ್ದ ದೃಶ್ಯ ಭಾನುವಾರ ಸಾಮಾನ್ಯವಾಗಿತ್ತು. ಇಲ್ಲಿ ಪೊಲೀಸರು ಸೇತುವೆ ಮೇಲೆ ಸಂಚಾರ ನಿಯಂತ್ರಿಸುವ ಕಾರ್ಯ ಮಾಡಬೇಕಿದೆ.
ಗುಯಿಲಗುಂದಿ ಹಾಗೂ ಗಳಗನಾಥ ಗ್ರಾಮಗಳಲ್ಲಿ ತುಂಗಭದ್ರಾ, ಬೆಳವಿಗಿಯಲ್ಲಿ ವರದಾ ನದಿಯು ನದಿಯ ದಂಡೆಯಲ್ಲಿರುವ ಹಾಗೂ ಗ್ರಾಮಗಳ ಅನೇಕ ಮನೆಗಳಿಗೆ ನುಗ್ಗಿದರೆ ರಾತ್ರಿ ಕಳೆಯುವುದು ಹೇಗೆ ಎಂಬ ಚಿಂತೆ ಜನರಲ್ಲಿ ಉಂಟಾಗಿದೆ. ಇದೇ ರೀತಿ ಗ್ರಾಮ ಸ್ಥಳಾಂತರದ ಮಧ್ಯೆಯೂ ಕೆಲ ಕುಟುಂಬಗಳು ಹಳೆಯ ಕಂಚಾರಗಟ್ಟಿಯಲ್ಲಿ ನೆಲೆಸಿದ್ದು ಅವರಿಗೂ ತುಂಗಭದ್ರೆಯಿಂದ ಅಪಾಯ ತಟ್ಟಬಹುದು.