ಮೈದುಂಬಿದ ತುಂಗಭದ್ರೆ: ಉಕ್ಕಡಗಾತ್ರಿ- ಫತ್ಯಾಪುರ ರಸ್ತೆ ಮುಳುಗಡೆ

172
Published on

ಹರಿಹರ: ಸತತ ಮಳೆಯಾಗುತ್ತಿರವ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ದಿನೇ ದಿನೆ ಹೆಚ್ಚಳವಾಗುತ್ತಿದ್ದು ಇದರ ಪರಿಣಾಮ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮತ್ತು ಫತ್ಯಾಪುರ ನಡುವಿನ ರಸ್ತೆ ಮುಳುಗಡೆಯಾಗಿದೆ.

ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ.

ಮಂಗಳವಾರ ಸಂಜೆಯಿಂದಲೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಬುಧವಾರ ಬೆಳಗ್ಗೆ ಸಂಪೂರ್ಣ ಏರಿಕೆಯಾಗಿ ನದಿ ಮೈದುಂಬಿ ಹರಿಯುತ್ತಿದೆ. ಇದರ ಪರಿಣಾಮ ಉಕ್ಕಡಗಾತ್ರಿ ಮತ್ತು ಫತ್ಯಾಪುರ ನಡುವಿನ ರಸ್ತೆ ಮುಳುಗಡೆ ಜತೆಗೆ ಪುಣ್ಯಕ್ಷೇತ್ರ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟವೂ ಮುಳುಗಿದೆ.

ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನದ ಸಮಿತಿಯವರು ಮುಂಜಾಗೃತ ಕ್ರಮವಾಗಿ ಸ್ನಾನಘಟ್ಟದ ಬಳಿ ಕಬ್ಬಿಣದ ಗೇಟ್‌ನ್ನು ಹಾಕಿ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನಕ್ಕೆ ಇಳಿಯದಂತೆ ಅಲ್ಲಲ್ಲಿ ಫಲಕಗಳನ್ನು ಹಾಕಿದ್ದಾರೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು. ನದಿಗೆ ಇಳಿಯುವುದು, ಈಜಾಡುವುದು, ಜಾನುವಾರುಗಳನ್ನು ನದಿಪಾತ್ರದಲ್ಲಿ ಮೇಯಿಸಲು ಬಿಡದಂತೆ ಹಾಗೂ ಮಕ್ಕಳ ಮೇಲೆ ನಿಗಾ ವಹಿಸುವಂತೆ ತಾಲೂಕು ಆಡಳಿತದ ಸೂಚನೆ ಪ್ರಕಾರ ಗ್ರಾಮ ಪಂಚಾಯಿತಿಯಿಂದ ಟಾಮ್ ಟಾಮ್ ಹೊಡಿಸಲಾಗುತ್ತಿದೆ.

ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ಮುಂಜಾಗೃತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಳೆಸಿರಿಗೆರೆಯಲ್ಲಿ ಅಧಿಕ ಮಳೆ: ಮಳೆಯ ವಿವರ: ಹರಿಹರ 4, ಕೊಂಡಜ್ಜಿ 4.2, ಹೊಳೆಸಿರಿಗೆರೆ 8, ಮಲೇಬೆನ್ನೂರು 5.6 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net