ಮತ್ತೆ ಏರಿಕೆಯಾದ ತುಂಗಭದ್ರಾ ನದಿ ನೀರಿನ ಮಟ್ಟ

HNL
Published on

ಹೊನ್ನಾಳಿ: ತಾಲೂಕಿನಲ್ಲಿ ಮೂರ‌್ನಾಲ್ಕು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಕಳೆದ ಎರಡು ದಿನಗಳಿಂದ ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ.

ಗುರುವಾರದವರೆಗೂ ನದಿ ನೀರಿನ ಮಟ್ಟ 7.500 ಮೀಟರ್ ಇತ್ತು. ಶುಕ್ರವಾರ ಬೆಳಗ್ಗೆ ಏಕಾಏಕಿ 10.250 ಮೀಟರ್‌ಗೆ ಏರಿಕೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ಮೆಕ್ಕೆಜೋಳ ಬೆಳೆಗಳಿಗೆ ನೀರು ನುಗ್ಗಿರುವುದರಿಂದ ಶೀತಬಾಧೆ ಆರಂಭವಾಗಿದೆ. ಕಳೆದ ಮೂರು ದಿನಗಳಲ್ಲಿ 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ ನದಿಗೆ 51 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಭದ್ರಾದಿಂದ ನೀರು ಬಿಟ್ಟರೆ ಮಾತ್ರ ಹೊನ್ನಾಳಿಯಲ್ಲಿ ಅಪಾಯದ ಮಟ್ಟ ಮೀರಲಿದೆ. ಆದರೂ ಕಾಳಜಿ ಕೇಂದ್ರ ಸ್ಥಾಪಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net