ತುಂಗಭದ್ರಾ ನದಿಗೆ ರಾಜಹಂಸಗಳ ವಲಸೆ

6 manvi 01
ಮಾನ್ವಿ ತಾಲೂಕಿನ ತುಂಗಭದ್ರಾ ನದಿಗೆ ಬಿಳಿ ಬಣ್ಣದ ರಾಜ ಹಂಸಗಳು ವಲಸೆ ಬಂದಿವೆ.
Published on

ಮಾನ್ವಿ: ತಾಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳಾದ ಕಾತರ್ಕಿ, ದದ್ಲ, ಚೀಕಲಪರ್ವಿ ನದಿ ದಂಡೆಯಲ್ಲಿ ವಲಸೆ ಪಕ್ಷಿಗಳ ಕಲರವ ಗಮನಸೆಳೆಯುತ್ತಿದೆ.

ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬರುತ್ತಿದ್ದ ಪಕ್ಷಿಗಳು ಜನವರಿ ಮೊದಲ ವಾರದಲ್ಲಿ ಕಾಣಿಸಿಕೊಂಡಿವೆ.

ನದಿ ದಂಡೆಯಲ್ಲಿ ಹೆಚ್ಚಿನ ಮೆರಗನ್ನು ತುಂಬುವುದಕ್ಕೆ ರಾಜಹಂಸ ಪಕ್ಷಿಗಳು ಹಿಂಡು ಹಿಂಡಾಗಿ ಬಂದಿದ್ದು ಪಕ್ಷಿ ಪ್ರಿಯರು ಹಾಗೂ ಸಾರ್ವಜನಿಕರು, ವನ್ಯ ಛಾಯಗ್ರಾಹಕರು ಬಿಳಿ ಬಣ್ಣದ ಕೆಂಪು ಕೊಕ್ಕಿನ ನೀಳ ಕಾಲುಗಳ ಸುಂದರವಾದ ರಾಜಹಂಸಗಳು ನೀರಿನಲ್ಲಿ ಗುಂಪುಗಳಾಗಿ ವಿಹರಿಸುತ್ತಿರುವುದನ್ನು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಪಟ್ಟಣ ಮತ್ತು ಗ್ರಾಮಿಣ ಪ್ರದೇಶದ ಜನರು ಪಕ್ಷಿಗಳನ್ನು ನೋಡಿ ಸಂತೋಷಗೊಂಡು ಮೊಬೈಲ್‌ನಲ್ಲಿ ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಾರೆ.

ಪಕ್ಷಿಪ್ರೇಮಿ ಹಾಗೂ ವನ್ಯ ಛಾಯಗ್ರಾಹಕ ಸಲ್ಲಾವುದ್ದಿನ್ ಮಾತನಾಡಿ, ಗ್ರೇಟರ್ ಪ್ಲೆಮಿಂಗೋ ಹಾಗೂ ರಾಜಹಂಸ ಪಕ್ಷಿ ಎಂದು ಕರೆಯಲಾಗುವ ಈ ಹಕ್ಕಿಯಲ್ಲಿ ಎರಡು ಪ್ರಭೇದಗಳಿದ್ದು ಕೆಂಪು ಗುಲಾಬಿ ಬಿಳಿ ಬಣ್ಣ ಮಿಶ್ರಿತ ರಾಜಹಂಸ ಮತ್ತು ಬಿಳಿ ಬಣ್ಣದ ರಾಜಹಂಸಗಳು ಗುಜರಾತನ ಕಚ್ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಚಳಿಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಸೂಕ್ತವಾದ ಪ್ರದೇಶಗಳನ್ನು ಅರಿಸಿಕೊಂಡು ಈ ಭಾಗಕ್ಕೆ ತಮ್ಮ ಸಂಗಾತಿಯೊಂದಿಗೆ ಬರುತ್ತವೆ. ಕಳೆದ ಬಾರಿ ನಮ್ಮ ಭಾಗದಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಪಕ್ಷಿಗಳು ಬಂದಿರಲ್ಲಿಲ್ಲ. ಈ ಬಾರಿ ವಲಸೆ ಹಕ್ಕಿಗಳಿಗೆ ತಮ್ಮ ಸಂತಾನೋತ್ಪತಿಗಾಗಿ ವಾತಾವರಣ ಅನುಕೂಲಕರಾವಾಗಿರುವುದರಿಂದ ತುಂಗಭದ್ರಾ ನದಿಯಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ವಲಸೆ ಬಂದಿವೇ ಎನ್ನುತ್ತಾರೆ.

ರಾಜಹಂಸಗಳು ಕಡಿಮೆ ಆಳವಿರುವ ನದಿಗಳಲ್ಲಿ ತಮ್ಮ ನೀಳವಾದ ಕೊಕ್ಕನ್ನು ಬಳಸಿ ನದಿ ನೀರಿನಲ್ಲಿರುವ ಪಾಚಿ ಮತ್ತು ಸೂಕ್ಷ್ಮ ಜೀವಿಗಳನ್ನು ತಿನ್ನುವುದರಿಂದ ನದಿಯಲ್ಲಿ ಸಾಕಷ್ಟು ಆಹಾರ ದೊರೆಯುತ್ತಿರುವುದರಿಂದ ಈ ವಷರ್ ಹಕ್ಕಿಗಳ ಸಂಖ್ಯೆಯಲ್ಲಿ ಹೆಚ್ಚಾಳವಾಗಿದೆ. ನದಿಯ ನೀರಿನಲ್ಲಿ ಬಿಳಿ ಬಣ್ಣದ ರಾಜ ಹಂಸಗಳನ್ನು ನೋಡುವುದಕ್ಕೆ ಮನಸ್ಸಿಗೆ ಹೆಚ್ಚಿನ ಖುಷಿ ನೀಡುತ್ತದೆ ಹಾಗೂ ಇವುಗಳು ಬಾನಿನಲ್ಲಿ ಗುಂಪಾಗಿ ಹಾರುವಾಗಲು ಸುಂದರವಾಗಿ ಕಾಣುತ್ತವೆ.

ವಿಜಯದಾಸರ ಜನ್ಮಸ್ಥಳ ಚೀಕಲಪರ್ವಿ ಗ್ರಾಮಕ್ಕೆ ಆಗಮಿಸುವ ಪ್ರವಾಸಿಗರು ವಿಧ-ವಿಧದ ವಲಸೆ ಪಕ್ಷಿಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ. ತಾಲೂಕಿನ ಜನರು ತುಂಗಭದ್ರಾ ನದಿಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪಕ್ಷಿಗಳನ್ನು ನೋಡುವುದರಿಂದ ಮನಸ್ಸಿಗೆ ಹಿತ ಸಿಗುತ್ತದೆ. ಪಕ್ಷಿಪ್ರೇಮಿ ಸಲ್ಲಾವುದ್ದಿನ್ ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net