ತುಂಗಭದ್ರಾ ಪ್ರವಾಹ ಬಾಧಿತ 14 ಕುಟುಂಬಗಳು ಅತಂತ್ರ

11 mdg
Published on

ಮುಂಡರಗಿ: ತುಂಗಭದ್ರಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಹಳೇ ಶಿಂಗಟಾಲೂರು ಗ್ರಾಮಸ್ಥರಿಗೆ ನಾಲ್ಕು ವರ್ಷ ಕಳೆದರೂ ಸ್ವಂತ ಸೂರು ಸಿಗದೆ ಪರದಾಡುವಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರನಿಧಿಗಳು ಕೊಟ್ಟ ಭರವಸೆ ಈಡೇರಿಸದ ಕಾರಣ ಇಂದಿಗೂ ಹಳೇ ಶಿಂಗಟಾಲೂರಿನ ಗ್ರಾಮಸ್ಥರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ.

2019ರ ಆ. 10ರಂದು ತಾಲೂಕಿನ ಹಳೇ ಶಿಂಗಟಾಲೂರ ಗ್ರಾಮದ 14 ಕುಟುಂಬಗಳು ತುಂಗಭದ್ರಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದವು. ಅಂದಿನ ಶಾಸಕರು, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ತಾಪಂ ಇಒ, ಗ್ರಾಪಂ ಅಧ್ಯಕ್ಷರು ಸೇರಿ ಅನೇಕ ಜನಪ್ರತಿನಿಧಿಗಳು, ಪ್ರಮುಖರು ಭೇಟಿ ನೀಡಿ ಗ್ರಾಮದ ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ ಭರವಸೆ ನೀಡಿದ್ದರು.

ಮನೆ ಇಲ್ಲದವರಿಗೆ ಹೊಸ ಶಿಂಗಟಾಲೂರಲ್ಲಿ ಜಾಗದ ವ್ಯವಸ್ಥೆ ಮಾಡಿ ಆಶ್ರಯ ಮನೆ ಕಲ್ಪಿಸಲಾಗುತ್ತದೆ. ಅಲ್ಲಿವರೆಗೂ ಗ್ರಾಮದ ಸರ್ಕಾರಿ ಜಾಗದಲ್ಲಿ ತಾತ್ಕಲಿಕವಾಗಿ ತಗಡಿನ ಶೆಡ್ ಹಾಕಿಕೊಡಲಾಗುತ್ತದೆ. ತಗಡಿನ ಶೆಡ್ ಹಾಕಿಕೊಡುವರೆಗೆ ಗ್ರಾಮದ ನೀರಾವರಿ ಇಲಾಖೆಯ ವಸತಿ ಗೃಹದಲ್ಲಿ ಆಶ್ರಯ ಪಡೆಯುವಂತೆ 14 ಕುಟುಂಬದವರಿಗೆ ಭರವಸೆ ನೀಡಿ ಮನವೊಲಿಸಿ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಆ ಕುಟುಂಬಗಳು ಹಳೇ ಶಿಂಗಟಾಲೂರಿನಿಂದ ನೀರಾವರಿ ಇಲಾಖೆ ವಸತಿ ಗೃಹದಲ್ಲಿ ಆಶ್ರಯ ಪಡೆದವು. ಒಂದು ತಿಂಗಳ ನಂತರ 14 ಕುಟುಂಬಗಳ ಪೈಕಿ ಒಂದು ಕುಟುಂಬ ಪುನಃ ಹಳೇ ಶಿಂಗಟಾಲೂರಿನ ಮನೆಗೆ ತೆರಳಿತ್ತು. 2022ರ ಅಕ್ಟೋಬರ್‌ನಲ್ಲಿ ಮತ್ತೆ ಪ್ರವಾಹ ಮುನ್ಸೂಚನೆ ಬಂದಾಗ ಅಧಿಕಾರಿಗಳು ಆ ಕುಟುಂಬವನ್ನೂ ಮತ್ತೆ ಹೊಸ ಗ್ರಾಮಕ್ಕೆ ಕರೆತಂದು ಗ್ರಾಪಂನಿಂದ ಖಾಲಿ ಖಾಗದಲ್ಲಿ ತಗಡಿನ ಶೆಡ್ ಹಾಕಿಕೊಂಡು ಇರಲು ಅನುಕೂಲ ಮಾಡಿಕೊಟ್ಟಿದ್ದರು. 13 ಕುಟುಂಬಗಳು ಇಂದಿಗೂ ವಸತಿ ಗೃಹಗಳಲ್ಲಿ ವಾಸವಾಗಿವೆ. ಆದರೆ, ಈವರೆಗೂ ನಿರಾಶ್ರಿತರಿಗೆ ನೀಡಿದ ಭರವಸೆ ಈಡೇರಿಸ ಕಾರಣ ಗ್ರಾಮಸ್ಥರಲ್ಲಿ ಬೇಸರ ಮಡುಗಟ್ಟಿದೆ.

ಬಾಡಿಗೆ ಮನೆಯಲ್ಲಿ ಸಿಬ್ಬಂದಿ: ಹಳೇ ಶಿಂಗಟಾಲೂರಿನ 13 ಕುಟುಂಬಗಳು ನೀರಾವರಿ ಇಲಾಖೆಯ 3 ವಸತಿ ಗೃಹಗಳಲ್ಲಿ ವಾಸಿಸುತ್ತಿರುವುದರಿಂದ ಕೇಂದ್ರ ಸ್ಥಳದಲ್ಲಿದ್ದು ಕಾರ್ಯನಿರ್ವಹಿಸುವ ಇಲಾಖೆ ಸಿಬ್ಬಂದಿಗೆ ವಾಸಿಸಲು ಜಾಗವಿಲ್ಲದೆ ಬೇರೆ ಕಡೆ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಹಳೇ ಶಿಂಗಟಾಲೂರ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಸರಿಪಡಿಸಿ 14 ಕುಟುಂಬಕ್ಕೆ ಸ್ವಂತ ಸೂರು ಕಲ್ಪಿಸಲು ಮುಂದಾಗಬೇಕಿದೆ.

ಹಳೇ ಶಿಂಗಟಾಲೂರು ಗ್ರಾಮಸ್ಥರಿಗೆ ಸ್ವಂತ ಸೂರು ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ. ಸಂಬಂಧ ಪಟ್ಟ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸೂಚನೆ ನೀಡುವುದರ ಮೂಲಕ 14 ಕುಟುಂಬಕ್ಕೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. -ಧನಂಜಯ ಎಂ ತಹಸೀಲ್ದಾರ್ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net