41.36 ಲಕ್ಷ ರೂ.ಉಳಿಕೆ ಬಜೆಟ್ ಮಂಡಿಸಿದ ಚನ್ನಗಿರಿ ಪುರಸಭೆ

25 chn
Published on

ಚನ್ನಗಿರಿ: ಚನ್ನಗಿರಿ ಪುರಸಭೆ 2025- 26ನೇ ಸಾಲಿಗೆ 41.36 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ್ದು ನಾನಾ ಮೂಲಗಳಿಂದ 42.80 ಕೋಟಿ ರೂ. ಆದಾಯ ನಿರೀಕ್ಷಿಸಿದೆ.

ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಯವ್ಯಯ ಸಭೆಯಲ್ಲಿ ಅಧ್ಯಕ್ಷರು ಬಜೆಟ್ ಮಂಡಿಸಿ ಆರಂಭಿಕ ಶಿಲ್ಕು 24.24 ಲಕ್ಷ ರೂ.ಇದೆ. 42,80 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು ಚನ್ನಗಿರಿಯ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.

ಆದಾಯ ನಿರೀಕ್ಷಿಸಿದ ಮೂಲಗಳು: ಆಸ್ತಿ ತೆರಿಗೆ - 1.25 ಕೋಟಿ ರೂ., ಎಸ್​ಎಫ್​ಸಿ ಯೋಜನೆ- 3.20 ಕೋಟಿ ರೂ., ದಂಡ ಹಾಗೂ ಇತರೆ- 5 ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಶುಲ್ಕ- 1 ಕೋಟಿ ರೂ., ಅಭಿವೃದ್ಧಿ ಶುಲ್ಕ- 1.5 ಕೋಟಿ ರೂ., ವ್ಯಾಪಾರ ಪರವಾನಗಿ ಶುಲ್ಕ- 6.10 ಲಕ್ಷ ರೂ., ವಾಹನ ನಿಲುಗಡೆ ಶುಲ್ಕ- 3ಲಕ್ಷ ರೂ., ಬಳಕೆದಾರರ ಶುಲ್ಕ- 2ಲಕ್ಷ ರೂ., ವಿದ್ಯುತ್ ಅನುದಾನ- 10 ಕೋಟಿ ರೂ., ಘನತ್ಯಾಜ್ಯ ನಿರ್ವಹಣಾ ಶುಲ್ಕ- 2 ಕೋಟಿ ರೂ., ಜಾತ್ರೆ, ಸಂತೇ ಹಾಗೂ ಇತರೆ- 16.30 ಲಕ್ಷ ರೂ., ನೀರು ಸರಬರಾಜು, ಹೊಸ ನಲ್ಲಿ ಸಂಪರ್ಕ- 3 ಲಕ್ಷ ರೂ., ಅನಿರ್ಬಂಧಿತ ಅನುದಾನ- 2.5 ಕೋಟಿ ರೂ.

ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಮುಖ್ಯ ಬಸ್ ನಿಲ್ದಾಣದ ನವೀಕರಣಕ್ಕೆ 1.30 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಕರೆದಿದ್ದು, ಸದ್ಯದಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಕಾಮಗಾರಿ ಪ್ರಾರಂಭವಾದರೆ ಖಾಸಗಿ ಬಸ್​ಗಳು ನಿಲ್ದಾಣದ ಒಳಗೆ ಬರಲು ಅವಕಾಶವಿರುವುದಿಲ್ಲ. ನಿಲ್ದಾಣದ ಹರಾಜು ಅವಧಿ ಕೂಟಡ ಮುಗಿದಿದೆ. ಕೆಲಸ ನಡೆಯುವುದರಿಂದ ಮರು ಹರಾಜು ತಡೆಹಿಡಿಯಬೇಕು. ಇಲ್ಲವೇ ಕಾಮಗಾರಿ ಮುಗಿಯುವವರೆಗೆ ನೀಡಬೇಕೆ ಎಂದು ಸಭೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂದರು.

ಕೋಳಿ ಅಂಗಡಿಗಳ ತೆರವಿಗೆ ಮನವಿ: ಸಂತೇ ಮೈದಾನದಲ್ಲಿ ಎರಡು ವಿದ್ಯಾರ್ಥಿ ನಿಲಯಗಳಿವೆ. ಅದರ ಪಕ್ಕ ಕೋಳಿ ಅಂಗಡಿಗಳಿವೆ. ಇದರಿಂದ ತ್ಯಾಜ್ಯ ವಸ್ತುವಿನ ಕೆಟ್ಟವಾಸನೆ ಹಾಗೂ ನಾಯಿಗಳ ಕಾಟ ಹೆಚ್ಚಾಗಿದೆ. ವಿದ್ಯಾರ್ಥಿಗಳು ನಿಲಯಕ್ಕೆ ಬರಲು ಹೆದರುತ್ತಿದ್ದಾರೆ. ಹಾಗಾಗಿ ಅಲ್ಲಿನ ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಲ್ಲಿಕಾರ್ಜುನ್ ಮನವಿ ಮಾಡಿದರು.

ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಪ್ರತಿಕ್ರಿಯಿಸಿ ವಾರ್ಡ್ ಸದಸ್ಯ ನಿಂಗಪ್ಪನವರು ಕೂಡ ಕೋಳಿ ಅಂಗಡಿಗಳ ತೆರವಿಗೆ ಮನವಿ ಸಲ್ಲಿಸಿದ್ದಾರೆ.ಸದಸ್ಯರೆಲ್ಲರ ಒಪ್ಪಿಗೆ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಾಕಷ್ಟು ನೀರಿದ್ದರೂ ನೀರಘಂಟಿಗಳು ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಹೀಗಾಗಿ ಹೊರಗುತ್ತಿಗೆ ಆಧಾರದಡಿ ನೀರು ವಿತರಣೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಡುವಂತೆ ಮನವಿ ಮಾಡಿದರು.

ಕಟ್ಟಡ ಮತ್ತು ನಿವೇಶನಗಳ ಆಸ್ತಿ ತೆರಿಗೆ ಪರಿಷ್ಕರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಈಗಿರುವ ತೆರಿಗೆ ಕಟ್ಟಲು ಜನರು ಒದ್ದಾಡುತ್ತಿದ್ದಾರೆ. ಆದ್ದರಿಂದ ಶೇ.3 ರಷ್ಟು ಮಾತ್ರ ತೆರಿಗೆ ಹೆಚ್ಚಿಸುವಂತೆ ಸದಸ್ಯರು ಒತ್ತಾಯಿಸಿದರು. ಮಲ್ಲಿಗೆರೆ ರಸ್ತೆಯಲ್ಲಿ ಅಯ್ಯಪ್ಪ ಸ್ವಾಮಿ ಸಮುದಾಯ ಭವನ ನಿರ್ವಿುಸಲು ನಿವೇಶನ ನೀಡಲು ಸದಸ್ಯರು ಒಪ್ಪಿಗೆ ನೀಡಿದರು.

ಉಪಾಧ್ಯಕ್ಷೆ ಸರ್ವಮಂಗಳಾ, ವ್ಯವಸ್ಥಾಪಕ ಆರಾಧ್ಯ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಅಭಿಯಂತರ ಹಾಲೇಶ್, ಕಂದಾಯ ಅಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಪ್ರೇಮಾಲೀಲಾ, ಪ್ರಭು ಸೇರಿ ಕಚೇರಿ ಸಿಬ್ಬಂದಿ, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net