ತುಂಗಭದ್ರ: ವಿವಿಧ ಕಾಲುವೆಗಳಿಗೆ ನೀರು

1600x960_1303050-lurch
Published on

ಹೊಸಪೇಟೆ: ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿಗೆ ವೇಳಾ ಪಟ್ಟಿಯಂತೆ ಕಾಲುವೆವಾರು ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್.ಬಸವರಾಜ್ ಅವರು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ೮೩.೧೮ ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು, ಒಳ ಹರಿವು ೨೧,೪೯೨ ಕ್ಯೂಸೆಕ್ ದಾಖಲಾಗುತ್ತಿದೆ. ಜಲಾಶಯದ ನೀರಿನ ಲಭ್ಯತೆಯನ್ನು ಆಧರಿಸಿ, ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ.

ಯಾವ ಕಾಲುವೆಗೆ ಎಷ್ಟು ನೀರು?
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ಆ.೦೩ ರಿಂದ ಸರಾಸರಿ ೩೦೦೦ ಕ್ಯೂಸೆಕ್ ನಂತೆ (ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯ ತುಂಬುವವರೆಗೆ), ಆ.೦೩ ರಿಂದ ಸರಾಸರಿ ೧೨೦೦ ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಆ.೩ ರಿಂದ ಸರಾಸರಿ ೬೫೦ ಕ್ಯೂಸೆಕ್, ರಾಯ ಬಸವಣ್ಣ ಕಾಲುವೆಗೆ ೨೫೦ ಕ್ಯೂಸೆಕ್ಸ್, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.೩ ರಿಂದ ಸರಾಸರಿ ೨೫ ಕ್ಯೂಸೆಕ್‌ನಂತೆ ನೀರು ಹರಿಸಲಾಗುತ್ತದೆ. ಅಲ್ಲದೇ, ಕಾಲುವೆಯಲ್ಲಿ ನೀರಿನ ಲಭ್ಯತೆ ಆಧರಿಸಿ ವಿವಿಧ ಕಾಲುವೆ ಮತ್ತು ಯೋಜನೆಗಳಿಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರೈತಭಾಂದವರಲ್ಲಿ ಮನವಿ:

ರೈತ ಭಾಂಧವರು ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿ ಪಡಿಸಿದ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಬೆಳೆ ಉಲ್ಲಂಘನೆ ಮಾಡುವುದು, ಕಾಲುವೆ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್, ಪಂಪ್ ಸೆಟ್‌ಗಳ ಮೂಲಕ ಅನಧಿಕೃತ ಜಮೀನುಗಳಿಗೆ ನೀರು ಹರಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯಗಳು ಕಂಡು ಬಂದಲ್ಲಿ ಕಾನೂನಿನ ಕ್ರಮ ಜರುಗಿಸಲಾಗುತ್ತದೆ. ರೈತ ಬಾಂಧವರು ಸಮರ್ಪಕ ನೀರು ನಿರ್ವಹಣೆಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net