

ಗುತ್ತಲ: ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ತುಂಗಭದ್ರಾ ಸೇತುವೆ ಶಿಥಿಲಗೊಂಡಿದೆ. ಸುಮಾರು 53 ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದ್ದ ಈ ಸೇತುವೆ ಹಾವೇರಿ- ವಿಜಯನಗರ-ಬಳ್ಳಾರಿ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
ಈ ಸೇತುವೆ ನಿರ್ಮಾಣಕ್ಕೆ 1960ರಲ್ಲಿ ಅಡಿಗಲ್ಲು ಹಾಕಲಾಯಿತು. 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಉದ್ಘಾಟನೆಗೊಂಡಿತು. ಗುತ್ತಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಕಾರ್ಮಿಕರು ಈ ಸೇತುವೆ ನಿರ್ಮಿಸಲು ಶ್ರಮಿಸಿದ್ದು ಈಗ ಇತಿಹಾಸ. ಪ್ರಸ್ತುತ ಈ ಸೇತುವೆ ಶಿಥಿಲಗೊಂಡು ತಳಭಾಗದ ಸಿಮೆಂಟ್ ಕಳಚುತ್ತಿದೆ. ಅಲ್ಲದೆ, ಇದರ ನಿರ್ವಹಣೆ ಸರಿಯಾಗಿಲ್ಲದ ಕಾರಣ ಸೇತುವೆ ಮೇಲ್ಭಾಗ ಹಾಳಾಗಿದೆ. ಸೇತುವೆಯ ಅಕ್ಕಪಕ್ಕದ ರಕ್ಷಣಾ ಗೋಡೆ ಎಲ್ಲೆಂದರಲ್ಲಿ ಮುರಿದು ಹಾಳಾಗಿದೆ.
ಕಾರಣ ಏನು?: ಇಷ್ಟು ವರ್ಷ ಭದ್ರವಾಗಿದ್ದ ಈ ಸೇತುವೆ ಈಗ ಶಿಥಿಲಗೊಳ್ಳಲು ಕಾರಣ ಹಲವು. 2008ರಲ್ಲಿ ಜಿಲ್ಲೆಯ ಗಡಿ ಮರು ವಿಂಗಡಣೆಯ ನಂತರ ಈ ಸೇತುವೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿತು. ಕಳೆದ 2023ರಲ್ಲಿ ಮತ್ತೆ ಸರ್ವೇ ಮಾಡಲಾಗಿದೆ. ಆಗ ಸೇತುವೆ ಶೇ.80ರಷ್ಟು ಭಾಗ ಹಾವೇರಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ ಎನ್ನಲಾಗಿದೆ. 2008ಕ್ಕಿಂತ ಮೊದಲು ಈ ಸೇತುವೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಈ ಗಡಿ ಮರು ವಿಂಗಡನೆಯ ಬಗ್ಗೆ ಅನೇಕ ಅನುಮಾನಗಳಿದ್ದು ಈ ಬಗ್ಗೆ ಹಾವೇರಿ ಜಿಲ್ಲಾಡಳಿತ ಗಮನ ಹರಿಸಬೇಕಿದೆ.
ನಿರ್ವಹಣೆ ಸರಿಯಾಗಿಲ್ಲದಿರುವುದೇ ಸೇತುವೆ ಶಿಥಿವಾಗಲು ಕಾರಣ. 2023ರವರೆಗೆ ಬೇಸಿಗೆಯಲ್ಲಿ ಹಾವೇರಿ ನಗರಕ್ಕೆ ನೀರು ಪೂರೈಸಲು ನದಿ ನೀರು ಸಂಗ್ರಹಕ್ಕಾಗಿ ಈ ಸೇತುವೆ ಕಳೆಗೆ ನಗರಸಭೆ ಪ್ರತಿವರ್ಷ ಉಸುಕಿನ ತಡೆಗೋಡೆ ನಿರ್ಮಿಸಿತ್ತು. ಕೆಲ ಬಾರಿ ತಡೆಗೋಡೆ ನಿರ್ಮಿಸುವ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಸೇತುವೆ ಕೆಳಗಿನ ಮರಳನ್ನೇ ಸಾವಿರಾರು ಚೀಲಗಳಿಗೆ ತುಂಬಿದ್ದರಿಂದ ಸೇತುವೆಯ ಕೆಳ ಭಾಗದಲ್ಲಿ ಕಲ್ಲುಗಳು ಕಿತ್ತುಬಂದಿವೆ ಎಂಬುದು ಅನೇಕರ ಅಭಿಪ್ರಾಯ. ಮಳೆಗಾಲದಲ್ಲಿ ಈ ಸೇತುವೆ ಮೇಲೆ ಬಿದ್ದ ಮಳೆಯ ನೀರು ಕೆಳಗೆ ಇಳಿಯದ ಕಾರಣದ ಬೈಕ್ ಸವಾರರು ಪ್ರಾಣ ಭಯದಲ್ಲಿ ಸಂಚಾರ ಮಾಡುವಂತಾಗಿದೆ. ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇದರಲ್ಲಿ ಬಹುತೇಕ ವಾಣಿಜ್ಯ ವ್ಯವಹಾರದ ವಾಹನಗಳಾಗಿವೆ. ನೆರೆಯ ಆಂಧ್ರಪ್ರದೇಶ- ತೆಲಂಗಾಣ ರಾಜ್ಯಕ್ಕೆ ಸಮೀಪವಾಗುವ ಕಾರಣ ಈ ಸೇತುವೆ ಎಲ್ಲರಿಗೂ ಅನುಕೂಲವಾಗಿದೆ.