

ಗುತ್ತಲ: ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ವರದಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಬೆಳವಿಗಿ ಗ್ರಾಮದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ನೀರಲಗಿ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿಗಳ ಸಂರ್ಪಕ ಕಡಿತಗೊಂಡಿದೆ.
ತುಂಗಭದ್ರಾ ನದಿಯ ನೀರಿನ ಮಟ್ಟ ಶನಿವಾರ ಸಂಜೆ 7.64 ಮೀಟರ್ ತಲುಪಿದ್ದು, (ಅಪಾಯ ಮಟ್ಟ 6.500 ಮೀಟರ್) ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಪ್ರತಿ ಗಂಟೆಗೆ 8 ಸೆಂ.ಮೀ. ಏರುತ್ತಿದ್ದು, ಭಾನುವಾರದ ವೇಳೆಗೆ 8.500 ಮೀಟರ್ ಏರಿಕೆಯಾಗುವ ಸಂಭವ ಅಧಿಕವಾಗಿದೆ. ಒಂದು ವೇಳೆ ನಿರಂತರ ಏರಿಕೆಯಾದರೆ ತುಂಗಭದ್ರಾ ನದಿಯ ಪಾತ್ರಗಳ ಜಮೀನುಗಳು ಸಂಪೂರ್ಣ ಜಲಾವೃತವಾಗಲಿದೆ.
ಶನಿವಾರ ಮಳೆ ಕಡಿಮೆಯಾಗಿದ್ದರೂ ತುಂಗಾ ಹಾಗೂ ಭದ್ರಾ ಜಲಾಯಶಗಳ ಹಿಂಭಾಗದಲ್ಲಿ ಸತತ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಏರುವ ಲಕ್ಷಣಗಳನ್ನು ಅಲ್ಲಗಳೆ ಯುವಂತಿಲ್ಲ. ನದಿಯ ಒಳ ಹರಿವು ಒಂದೇ ಪ್ರಮಾಣದಲ್ಲಿ ಏರುತ್ತಿರುವುದು ಪ್ರವಾಹ ಎದುರಾಗುವ ಸಾಧ್ಯತೆ ಅಧಿಕವಾಗಿದೆ. ವರದಾ ನದಿ ತುಂಬಿ ಹರಿಯುತ್ತಿರುವುದರಿಂದ ಬೆಳವಿಗಿ ಗ್ರಾಮದಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ನೀರಲಗಿ,
ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿಗಳ ಸಂರ್ಪಕ ಕಡಿತಗೊಂಡಿದೆ.