

ಶಿವಮೊಗ್ಗ: ತುಂಗಭದ್ರಾ ಜಲಾಶಯದಂತೆ ಗಾಜನೂರಿನ ತುಂಗಾ ಜಲಾಶಯದಲ್ಲೂ ಕ್ರಸ್ಟ್‌ಗೇಟ್‌ಗಳ ರೋಪ್ ಕೂಡ ಹಾಳಾಗುವ ಮುನ್ನ ನೀರಾವರಿ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಜಲಾಶಯದ ಬೇರೆ ಕ್ರಸ್ಟ್‌ಗೇಟ್‌ಗಳ ರೋಪ್‌ಗಳು ಕೂಡ ಸರಿಯಾಗಿವೆಯಾ ಎಂಬುದನ್ನು ಪರೀಶಿಲಿಸಿ ದೊಡ್ಡಮಟ್ಟದಲ್ಲಿ ಅನಾಹುತ ಆಗುವುದನ್ನು ತಪ್ಪಿಸಬೇಕಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.
ತುಂಗಭದ್ರಾ ಜಲಾಶಯವು ಮೂರು ರಾಜ್ಯಗಳ ಲಕ್ಷಾಂತರ ಅನ್ನದಾತರ ಜೀವನಾಡಿಯಾಗಿತ್ತು. ಆದರೆ 19ನೇ ಕ್ರಸ್ಟ್‌ಗೇಟ್ ಹಾಳಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿಸುವಂತಾಗಿದೆ. ಅದೇ ರೀತಿ ಅತಿ ಚಿಕ್ಕ ಜಲಾಶಯವಾಗಿರುವ ತುಂಗಾ (3.24 ಟಿಎಂಸಿ)ದಲ್ಲೂ ಕೂಡ ರೋಪ್ ಹಾಳಾಗಿದೆ ಎಂಬ ಕಾರಣಕ್ಕೆ 22 ಕ್ರೆಸ್ಟ್‌ಗೇಟ್‌ಗಳ ಪೈಕಿ ಇದುವರೆಗೆ ಒಂದು ಗೇಟ್ ತೆರೆದಿಲ್ಲ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಹಾನಿ ಅಥವಾ ಅನಾಹುತ ಆಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಗಾಜನೂರಿನ ತುಂಗಾ ಜಲಾಶಯದ 22 ಕ್ರೆಸ್ಟ್‌ಗೇಟ್‌ಗಳಲ್ಲಿ ಒಂದು ಗೇಟ್‌ನ ರೋಪ್ ಹಾಳಾಗಿದ್ದು ಬದಲಾವಣೆ ಮಾಡಬೇಕಿದೆ. ಜತೆಗೆ ಗಾಜನೂರು ಜಲಾಶಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶಿಲ್ಟ್ ಮತ್ತು ಹೂಳು ತುಂಬಿಕೊಂಡಿದೆ. ಅದನ್ನು ತೆಗೆಸಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗಮನ ಹರಿಸಬೇಕು. ಆ ಮೂಲಕ ಹೆಚ್ಚು ನೀರು ಸಂಗ್ರಹಕ್ಕೆ ಅವಕಾಶ ಇದೆಯಾ ಎಂಬುದರ ಬಗ್ಗೆ ಗಮನ ಹರಿಸಬೇಕು. ನೀರಾವರಿ ತಜ್ಞರು, ಅಧಿಕಾರಿಗಳ ಜತೆ ಚರ್ಚಿಸಬೇಕು ಎಂದು ಮನವಿ ಮಾಡಿದರು.
ತುಂಗಾ ಮೇಲ್ದಂಡೆ ಯೋಜನೆಯಡಿ ಹಾವೇರಿವರೆಗೆ ಕುಡಿಯುವ ನೀರು ಹರಿಯುತ್ತದೆ. ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಹಲವು ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. 1952ರಲ್ಲಿ ಜಲಾಶಯ ಕಟ್ಟಿದ್ದು ಆನಂತರ 2009ರಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಯಿತು. ಬೇರೆ ಜಲಾಶಯಗಳಿಗೆ ಹೋಲಿಕೆ ಮಾಡಿದರೆ ಇದು ತುಂಬಾ ಚಿಕ್ಕ ಜಲಾಶಯವಾಗಿದೆ. ನಾನು ಶಾಸಕನಾಗಿದ್ದಾಗ ಸಿದ್ದು ನ್ಯಾಮೆಗೌಡ ಅವರ ನೇತೃತ್ವದಲ್ಲಿ ಜಲಾಶಯಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಸಮಿತಿ ರಚಿಸಿತ್ತು. ಆ ಸಮಿತಿ ತುಂಗಾ ಜಲಾಶಯಕ್ಕೂ ಬಂದು ಪರಿಶೀಲಿಸಿ ಹೂಳು ಮತ್ತು ಶಿಲ್ಟ್ ತೆಗೆಯುವ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಆದರೆ ಇದುವರೆಗೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ದೀಪಕ್ ಸಿಂಗ್, ನರಸಿಂಹ ಗಂಧನಮನೆ, ಸಿದ್ದಪ್ಪ, ಎಚ್.ಎಂ.ಸಂಗಯ್ಯ, ಜಯಣ್ಣ, ಸಂಜಯ್ ಕಶ್ಯಪ್, ಸಿದ್ದೇಶ್ವರ, ಪ್ರವೀಣ್, ಅರುಣ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.