

ಮಧುಗಿರಿ: ರೈತರು ಹಾಗೂ ಹೈನುಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ 1.6 ಲಕ್ಷ ರೂಪಾಯಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಕ್ಷೀರಭವನದಲ್ಲಿ ಸೋಮವಾರ ಡೇರಿ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ, ರಾಜ್ಯ ಹಾಗೂ ಕೆಎಂಎಫ್, ತುಮುಲ್ ಸಹಯೋಗದಲ್ಲಿ ನೀಡುವ ಕೆಸಿಸಿ ಸಾಲಕ್ಕೆ ಪಹಣಿ ಅಡಮಾನ ಇಡದೆ ಹಸು ಖರೀದಿಸಲು 1.6 ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿದೆ. ಸಾಲಕ್ಕೆ ಶೇ.9 ಬಡ್ಡಿಯಿದ್ದು, ಕೇಂದ್ರ ಸರ್ಕಾರ ಶೇ.2 ಬಡ್ಡಿ ಸಹಾಯಧನ ನೀಡುತ್ತಿದ್ದು, ರಾಜ್ಯ ಸರ್ಕಾರ ಶೇ.4 ಬಡ್ಡಿಯನ್ನು ನೀಡುತ್ತಿದೆ, ನಿಗದಿತ ಅವಧಿಯಲ್ಲಿ ಅಸಲು ಪಾವತಿಸಿದರೆ ಉಳಿದ ಬಡ್ಡಿ ಮನ್ನವಾಗುತ್ತದೆ. ಬರಗಾದಲ್ಲೂ ಹೈನುಗಾರರಿಗೆ ಸರ್ಕಾರ ನೆರವಿನ ಹಸ್ತ ಲಭಿಸಿದೆ. ಪಾಸ್‌ಬುಕ್, ಆಧಾರ್‌ಕಾರ್ಡ್, ೆಟೋ ಸೇರಿ ಡೇರಿಯಿಂದ ದೃಢೀಕರಣ ದಾಖಲೆಯಾಗಿ ಸಲ್ಲಿಸಬೇಕು. 154 ಸಹಕಾರಗಳಿಂದ 31 ಸಾವಿರ ಸದಸ್ಯರಿದ್ದು, 9 ಸಾವಿರ ಸದಸ್ಯರು ಹಾಲು ಹಾಕುತ್ತಿದ್ದಾರೆ. ಮೊದಲ ಕಂತಿನಲ್ಲಿ ಹಾಲು ಹಾಕುವವರಿಗೆ ಹಾಗೂ 2ನೇ ಕಂತಿನಲ್ಲಿ ಇತರರಿಗೂ ಸಾಲ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರೊನಾ ಸಮಯದಲ್ಲಿ ಹೈನುಗಾರರಿಗೆ ಸೌಲಭ್ಯ ನೀಡುತ್ತಿದ್ದು, ಸಾಲ ಮನ್ನವಾಗಲ್ಲ. ಈ ಬಗ್ಗೆ ಡೇರಿಗಳ ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೂ ಈ ಬಗ್ಗೆ ಅರಿವು ಮೂಡಿಸಬೇಕು. ಕರೊನಾ ಹರಡುವಿಕೆ ಹೆಚ್ಚಾಗಿದ್ದು, ಪರಸ್ಪರ ಅಂತರ ಹಾಗೂ ಸ್ವಚ್ಛತೆಗೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು. ಹೈನುಗಾರರ ಕುಟುಂಬಕ್ಕೆ ವಿಶೇಷ ಪರಿಹಾರ ನಿಧಿಯಲ್ಲಿ 4 ಮಂದಿಗೆ ತಲಾ 10 ಸಾವಿರ ರೂಪಾಯಿ ಹಾಗೂ ಮರಣ ಪರಿಹಾರವಾಗಿ 8 ಮಂದಿಗೆ 3 ಲಕ್ಷ, ಹಸು ಮೃತಪಟ್ಟಿದ್ದಕ್ಕೆ 10 ಸಾವಿರ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.