ತಿಮ್ಮಲಾಪುರ ಕೆರೆಗೆ ಹರಿದ ಹೇಮೆ ; ದಶಕಗಳ ನಂತರ ಕನಸು ನನಸು ; ತಿಂಗಳು ಹರಿದಾಗಷ್ಟೇ ಹುಳಿಯಾರು ಕೆರೆಗೆ ನೀರು

8HULIYAR1
Published on

ಹುಳಿಯಾರು : ಹೇಮೆ ಯೋಜನೆ ಮಂಜೂರಾಗಿ ದಶಕಗಳ ನಂತರ ಹುಳಿಯಾರು ಹೋಬಳಿಯ ತಿಮ್ಮಲಾಪುರ ಕೆರೆಗೆ ಹೇಮಾವತಿ ನೀರು ಶುಕ್ರವಾರ ಹರಿದಿದೆ. ಈ ಮೂಲಕ ಬರದನಾಡಿನ ಜನರ ಮೂರ‌್ನಲ್ಕು ದಶಕಗಳ ಕನಸು ನನಸಾಗಿದೆ. ಆದರೆ ತಿಮ್ಮಲಾಪುರ ಕೆರೆ ತುಂಬಿ ಹುಳಿಯಾರು ಕೆರೆಗೆ ಹೇಮೆ ಹರಿಯಲು ಇನ್ನೂ ಕನಿಷ್ಠ 1 ತಿಂಗಳು ನೀರು ಹರಿಸುವ ಅಗತ್ಯವಿದೆ.

ದಶಕಗಳ ಹಿಂದೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ 64 ದಿನಗಳ ಅಹೋರಾತ್ರಿ ಹೋರಾಟ ಫಲ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಹಾಗೂ ಸಿ.ಬಿ.ಸುರೇಶ್ ಬಾಬು ಒತ್ತಡದ ಪರಿಣಾಮ ಬರದನಾಡು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿತ್ತು. ಆದರೆ ಯೋಜನೆ ಮಂಜೂರಾಗಿ ದಶಕಗಳು ಕಳೆದಿದ್ದರೂ ಕಾಮಗಾರಿ ನೆನಗುದಿಗೆ ಬಿದ್ದು ತಾಲೂಕಿಗೆ ಹೇಮೆ ಹರಿಯುವ ಕನಸು ಕನಸಾಗಿಯೇ ಉಳಿದಿತ್ತು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನೆನಗುದಿಗೆ ಬಿದ್ದಿದ್ದ ಕಾಮಗಾರಿಗೆ ಜಿಂಕೆ ವೇಗ ಕೊಟ್ಟರಲ್ಲದೆ ಕಾಮಗಾರಿ ಅನುಷ್ಠಾನಕ್ಕೆ ಇದ್ದ ಎಡರುತೊಡರುಗಳನ್ನು ನಿವಾರಿಸಿ ಕಳೆದ ವರ್ಷವೇ ತಾಲೂಕಿಗೆ ಪ್ರಾಯೋಗಿಕವಾಗಿ ಹೇಮೆ ಹರಿಸಿ ಈ ಭಾಗದ ಜನರ ಕನಸು ನನಸಾಗಿಸಿದರು.

ಕಳೆದ ವರ್ಷ ಸಾಸಲು, ಶೆಟ್ಟಿಕೆರೆ, ಅಣೆಕಟ್ಟೆ, ಅಂಕಸಂದ್ರ ಕೆರೆಗಳನ್ನು ತುಂಬಿ ಬರಗೂರು, ಟೀ ತಾಂಡ್ಯ, ಸಂಧಿ ಹೊಳೆ ಅಣೆಗಳು ಭರ್ತಿಯಾಗುವಷ್ಟರಲ್ಲಿ ಜಲಾಶಯದಲ್ಲಿ ನೀರಿನ ಕೊರತೆ ಮುಂದಿಟ್ಟು ನಿಲ್ಲಿಸಲಾಗಿತ್ತು. ಪರಿಣಾಮ ಹೇಮೆ ಯೋಜನೆಯ ಕೊನೆಯ ಕೆರೆಗಳಾದ ತಿಮ್ಮಲಾಪುರ ಮತ್ತು ಹುಳಿಯಾರು ಕೆರೆಗೆ ನೀರು ಹರಿಯದೆ ಈ ಭಾಗದ ಜನರಿಗೆ ತೀರ್ವ ನಿರಾಸೆ ಮೂಡಿಸಿತ್ತು.

ಉದ್ಯೋಗ ಅರಸಿ ಗುಳೆ ಹೋಗಿದ್ದ ಜನ : ಈ ವರ್ಷ ಕಳೆದ ಎರಡ್ಮೂರು ತಿಂಗಳಿಂದ ಹೇಮೆ ನೀರು ನಿರಂತರವಾಗಿ ಹರಿಯುವ ಜತೆಗೆ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ಗೂಬೆಹಳ್ಳಿ, ನಂದಿಹಳ್ಳಿ ಗ್ರಾಮಗಳ ಎರಡ್ಮೂರು ಸಣ್ಣ ಪಿಕಪ್‌ಗಳನ್ನು ತುಂಬಿ ಬಹು ನಿರೀಕ್ಷಿತ ಕೆರೆಯಾದ ತಿಮ್ಲಾಪುರ ಕೆರೆಗೆ ಶುಕ್ರವಾರ ಹೇಮೆ ನೀರು ಹರಿಯುತ್ತಿದೆ. ಸರಿಸುಮಾರು ನಾಲ್ಕು ಕಿ.ಮೀ ಉದ್ದವಿರುವ ಈ ಕೆರೆ ತುಂಬಲು ಇನ್ನೂ ಒಂದು ತಿಂಗಳು ನೀರು ಹರಿಯಬೇಕಿದೆ. ಮಳೆಯಾಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಸಮರ್ಪಕವಾದ ಮಳೆಯಿಲ್ಲದೆ ಬರದನಾಡಾಗಿ ಪರಿವರ್ತನೆಯಾಗಿತ್ತು. ಒಂದು ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ತೋಟಗಳು ಒಣಗಿ ಇಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣ ಸೇರಿದ್ದರು.

ಕೊಳವೆ ಬಾವಿಗಳಿಗೆ ಮರು ಜೀವ : 2 ನೇ ವರ್ಷ ತಾಲೂಕಿಗೆ ಗುರುತ್ವಾಕರ್ಷಣೆ ಮೂಲಕ ಹೇಮೆ ಹರಿಯುತ್ತಿರುವುದರಿಂದ ಬತ್ತಿದ್ದ ಬಾವಿ, ಕೊಳವೆಗಳಲ್ಲಿ ನೀರು ಬರಲಾರಂಭಿಸಿದೆ. ಇದರಿಂದಾಗಿ ನೀರು ಹರಿಯುತ್ತಿರುವ ಭಾಗದ ರೈತರ ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹಾಗಾಗಿ ಹೇಮೆ ನೀರು ಹರಿಯುವ ಪ್ರದೇಶದ ಒಂದೊಂದು ಕೆರೆ ತುಂಬಿದಾಗಲೂ ಜನರು ಹೇಮೆ ಹರಿಯುತ್ತಿರುವುದರನ್ನು ನೋಡಲು ಮುಗಿಬೀಳುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಬೈಕು, ಸೈಕಲ್, ಕಾರು ಹೀಗೆ ವಾಹನಗಳಲ್ಲಿ ತೆರಳಿ ಕೆರೆ ಕೋಡಿ ಬಳಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಒಟ್ಟಾರೆ ಹೇಮೆ ನೀರು ಬರದ ನಾಡಿದ ಚಿತ್ರಣವನ್ನು ಬದಲಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net