ತುಮಕೂರು ಹೆಲಿಪ್ಯಾಡ್ ವಿವಿ: ತೆರವಿಗೆ ಸ್ಪಂದಿಸದ ಜಿಲ್ಲಾಡಳಿತ

06Tmk_Helipad_VV_01
Published on

ವಿಶೇಷ ವರದಿ ತುಮಕೂರು

ರಾಜ್ಯದಲ್ಲೇ ಅತಿಹೆಚ್ಚು ಹೆಲಿಪ್ಯಾಡ್‌ಗಳನ್ನು ಹೊಂದಿರುವ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ತುಮಕೂರು ವಿವಿ ಪಾತ್ರವಾಗಿದೆ. 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಕಂಟಕವಾಗಿರುವ ಹೆಲಿಪ್ಯಾಡ್‌ಗಳ ತೆರವಿಗೆ ಹಲವು ಬಾರಿ ಮನವಿ ಮಾಡಿದರೂ 8 ವರ್ಷಗಳಿಂದ ಜಿಲ್ಲಾಡಳಿತ ಸ್ಪಂದಿಸದೆ ಮೌನ ತಾಳಿದೆ.


ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯು ಪ್ರಧಾನಿ ಬೆಂಗಾವಲಿನ 3 ಹೆಲಿಕಾಪ್ಟರ್‌ಗಳು ಸೇರಿ 4 ಹೆಲಿಕಾಪ್ಟರ್‌ಗಳು ಇಳಿಯಲು 4 ಹೆಲಿಪ್ಯಾಡ್‌ಗಳನ್ನು 19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಆದರೆ, ಗಣ್ಯರ ಅನುಕೂಲಕ್ಕಾಗಿ ನಿರ್ಮಿಸಿದ್ದ ಈ ಹೆಲಿಪ್ಯಾಡ್‌ಗಳು ವಿವಿ ಮಕ್ಕಳ ಕ್ರೀಡಾಚಟುವಟಿಕೆಯನ್ನು ಕಸಿದುಕೊಂಡಿವೆ.


ಹತ್ತಾರು ಬಾರಿ ಮನವಿ: ಈ ಹಿಂದೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿತ್ತು. ಆದರೆ, ವಿವಿ ಆವರಣದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾದ ಜಿಲ್ಲಾಡಳಿತವು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳತ್ತ ಗಮನವನ್ನೇ ಹರಿಸಲಿಲ್ಲ. 8 ವರ್ಷಗಳ ಹಿಂದೆ ವಿವಿ ಆವರಣದಲ್ಲಿ ಅರ್ಧ ಅಡಿ ದಪ್ಪದ ಜಲ್ಲಿ, ಡಾಂಬರು ಹಾಕಿ ನಿರ್ಮಿಸಿದ್ದ ಶಾಶ್ವತ ಹೆಲಿಪ್ಯಾಡ್ ತೆರವುಗೊಳಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಂತರ ವಿವಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ಕೊಡುವುದರ ಜತೆಗೆ ಅಂತರ ಕಾಲೇಜು ಕ್ರೀಡಾಕೂಟವನ್ನು ಏರ್ಪಡಿಸುವುದೇ ವಿವಿಗೆ ದೊಡ್ಡ ಸವಾಲೆನಿಸಿದೆ. ಸಂಪೂರ್ಣವಾಗಿ ವಿದ್ಯಾರ್ಥಿಗಳು ಕ್ರೀಡೆಯಿಂದಲೇ ದೂರವಾಗುವಂತಾಗಿದೆ.

400 ಮೀ., ಟ್ರಾೃಕ್ ಕ್ರೀಡಾಂಗಣ ಇಲ್ಲ: ತುಮಕೂರು ವಿವಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿವಿ ಆವರಣದಲ್ಲಿ 400 ಮೀ. ಟ್ರಾೃಕ್‌ವುಳ್ಳ ಕನಿಷ್ಠ ಸವಲತ್ತುಗಳುಳ್ಳ ಕ್ರೀಡಾಂಗಣ ಕೂಡ ಇಲ್ಲ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಬಿ.ಎ., ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 500 ರೂ. ಹಾಗೂ ಬಿ.ಕಾಂ.ವಿದ್ಯಾರ್ಥಿಗಳಿಂದ 1000 ರೂ. ಕ್ರೀಡಾ ಶುಲ್ಕವನ್ನು ವಿವಿಯಲ್ಲಿ ವಸೂಲಿ ಮಾಡಲಾಗುತ್ತಿದೆಯಾದರೂ ಕನಿಷ್ಠ ಕ್ರೀಡಾ ಸೌಲಭ್ಯ ಒದಗಿಸದೇ ಇರುವುದು ಕ್ರೀಡೆಯೆಡೆಗೆ ವಿವಿಯ ತಾತ್ಸಾರ ಮನೋಭಾವನೆಗೆ ಕನ್ನಡಿ ಹಿಡಿದಂತಿದೆ.


ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಿರುವ 4 ಹೆಲಿಪ್ಯಾಡ್‌ಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಈವರೆಗೆ ಯಾವುದೇ ಉತ್ತರ ಬಂದಿಲ್ಲ. ವಿವಿಯಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲು ತೀವ್ರ ತೊಂದರೆ ಆಗಿದ್ದು ಈ ಬಗ್ಗೆ ವಿವಿ ಸಿಂಡಿಕೇಟ್ ಸದಸ್ಯರ ಜತೆ ಚರ್ಚಿಸಿದ್ದೇನೆ.
- ಪ್ರೊ.ಕೇಶವ್ , ಪ್ರಭಾರ ಕುಲಪತಿ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net