​ ಡಿಸಿ, ಸಿಇಒ ಜಗಳದಲ್ಲಿ ಬಡವಾಯ್ತು ತುಮಕೂರು ಜಿಲ್ಲೆ!?

DC_CEO
Published on

ತುಮಕೂರು: ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹಾಗೂ ಜಿಪಂ ಸಿಇಒ ಜಿ.ಪ್ರಭು ನಡುವೆ ಆಡಳಿತದಲ್ಲಿ ಸಾಮರಸ್ಯವಿಲ್ಲ ಎಂಬುದು ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಬಯಲಾಯಿತು.

ನಾನೂ ತುಮಕೂರು ಜಿಪಂ ಸಿಇಒ ಆಗಿ ಕೆಲಸ ಮಾಡಿದ್ದೇನೆ ಆದರೆ, ಜಿಲ್ಲಾಧಿಕಾರಿಯಾಗಿ ಕರೆಯುವ ಸಭೆಗಳಿಗೆ ತಾಪಂ ಇಒಗಳು ಹಾಜರಾಗುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆ ಭಗೆಹರಿಸಲೂ ಸಾಧ್ಯವಾಗಿಲ್ಲ ಎಂದು ಶುಭಕಲ್ಯಾಣ್​ ಸಚಿವರ ಮುಂದೆ ಅಳಲು ತೋಡಿಕೊಂಡರು.

ಸಚಿವರ ಎದುರು ಜಿಲ್ಲಾಧಿಕಾರಿ ದೂರಿಗೆ ವಿಚಲಿತರಾದ ಜಿಪಂ ಸಿಇಒ ಜಿ.ಪ್ರಭು ಸಭೆ ಕರೆದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರು. ಹಿರಿಯ ಅಧಿಕಾರಿಗಳ ನಡುವೆ ಸಾಮರಸ್ಯವಿಲ್ಲ ಎಂಬುದನ್ನು ಅರಿತ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ನಡುವೆಯೇ ಮಾತನಾಡಿ ಜಿಲ್ಲಾಧಿಕಾರಿಗಳು ಸಿಇಒ ವಿರುದ್ಧ ದೂರು ಹೇಳುತ್ತಿದ್ದಾರೆ ಎಂದರು. ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಮಧ್ಯಪ್ರವೇಶಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಹುದ್ದೆಗಳು ಜಿಲ್ಲೆಯ ಎರಡು ಕಣ್ಣುಗಳು ಸಾಮರಸ್ಯರಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಹಿರಂಗವಾಗಿಯೇ ಅಧಿಕಾರಿಗಳ ಪರಸ್ಪರ ಆರೋಪಿಸಿಕೊಂಡಿದ್ದನ್ನು ಗಮನಿಸಿ ಕೆಂಡಾಮಂಡಲರಾದ ಸಚಿವ ಡಾ.ಜಿ.ಪರಮೇಶ್ವರ್​, ಡಿಸಿ, ಸಿಇಒ ಒಟ್ಟಾಗಿ ಕೆಲಸ ಮಾಡಬೇಕು, ಜನರಿಗೆ ನಾವು ಉತ್ತರದಾಯಿಗಳಾಗಿದ್ದು ಅಧಿಕಾರಿಗಳು ಜವಬ್ಧಾರಿ ಅರಿತುಕೊಳ್ಳಬೇಕು ಎಂದು ಏರುದನಿಯಲ್ಲಿಯೇ ಸೂಚನೆ ನೀಡಿದರು.

ಶಿರಾ ತಾಪಂ ಇಒ ಹರೀಶ್​, ತುಮಕುರು ತಾಪಂ ಇಒ ಹರ್ಷವಧನ್​ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಡಾ.ಜಿ.ಪರಮೇಶ್ವರ, ತಾಪಂ ಇಒಗಳು, ತಹಸೀಲ್ದಾರ್​ಗಳನ್ನು ನಾನು ಮಾತನಾಡಿಸಿಲ್ಲ ಆದರೂ ಕೆಲಸ ಮಾಡದೇ ಜಿಲ್ಲೆಯಲ್ಲಿ ಹುಡುಗಾಟ ಆಡುತ್ತಿದ್ದಾರೆ, ನನ್ನ ಮನೆಯಿರುವ ಹೆಗ್ಗೆರೆಯಲ್ಲಿಯೇ ಕಸ ತೆಗೆಯಲು ಸಾಧ್ಯವಾಗಿಲ್ಲ, ಪಿಡಿಒಗೆ ನೋಟಿಸ್​ ಕೊಟ್ಟು ಅಮಾನತುಗೊಳಿಸಿ ಎಂದು ಆದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net