ಗೋಮಾಳದಲ್ಲಿ ಉಳುಮೆ ಮಾಡಲು ಅಡ್ಡಿ: ಮುಖಂಡ ಕೆ.ಟಿ. ಶಾಂತಕುಮಾರ್ ಆಕ್ರೋಶ

2
ಜಕ್ಕನಹಳ್ಳಿ ಮತ್ತು ಚೌಡ್ಲಾಪುರ ವ್ಯಾಪ್ತಿಯ ರೈತರು ಗೋಮಾಳದಲ್ಲಿ ಉಳುಮೆಗೆ ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರೈತ ಸೇವಾ ಸಂಘದ ಅಧ್ಯಕ್ಷ ಇಂದ್ರೇಶ್, ಉಪಾಧ್ಯಕ್ಷ ಎಚ್.ಆರ್. ಭೋಜರಾಜು, ಕಾರ್ಯದರ್ಶಿ ಎ.ಎಂ. ಲಿಂಗರಾಜು, ಜಕ್ಕನಹಳ್ಳಿ ಮತ್ತು ಚೌಡ್ಲಾಪುರ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸಿದರು.
Published on

ತಿಪಟೂರು: ಜಕ್ಕನಹಳ್ಳಿ ಮತ್ತು ಚೌಡ್ಲಾಪುರ ವ್ಯಾಪ್ತಿಯ ರೈತರು ಗೋಮಾಳದಲ್ಲಿ ಉಳುಮೆ ಮಾಡಲು ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.


ಭೂ ರಹಿತ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ದೌರ್ಜನ್ಯ ನಿಲ್ಲಬೇಕು. ಸಾಗುವಳಿಗೆ ಅರ್ಜಿ ಹಾಕಿರುವ ಅರ್ಹ ರೈತರಿಗೆ ಕೂಡಲೇ ಸಾಗುವಳಿ ಪತ್ರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಗ್ರಹಿಸಿದರು.


ಚೌಡ್ಲಾಪುರದ ಅರ್ಜಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಈ ಕೂಡಲೇ, ಸರ್ಕಾರದ ಕಂದಾಯ ಇಲಾಖೆ, ಅರಣ್ಯ, ಅಮೃತ್ ಮಹಲ್ ಕಾವಲ್‌ಗೆ ಸಂಬಂಧಪಟ್ಟ ಅಧಿಕಾರಿಗಳು ಎಲ್ಲರ ಸಮಕ್ಷಮ ಜಮೀನಿನ ಸರ್ವೇ ನಡೆಸಿ, ಯಾವ ಭೂಮಿ ಯಾವ ಇಲಾಖೆಗೆ ಸೇರಬೇಕು, ಯಾವ ಭೂಮಿ ರೈತರಿಗೆ ಸೇರಬೇಕು ಎಂಬುದನ್ನು ನಿರ್ಧರಿಸಬೇಕು. ಆದರೆ 1962ರಿಂದಲೂ ಈ ಕಾರ್ಯ ಕೈಗೆತ್ತಿಕೊಳ್ಳಲು ಈ ಮೂರೂ ಇಲಾಖೆಗಳಲ್ಲಿ ಸಮನ್ವಯದ ಕೊರತೆ ಕಾಡುತ್ತಿದೆ. ಈಗಲಾದರೂ ಇದು ಕೊನೆಗೊಳ್ಳಬೇಕು ಎಂದರು.


ಚೌಡ್ಲಾಪುರದ ಸ.ನಂ.11ರಲ್ಲಿ ಅಂದಾಜು 2 ಸಾವಿರ ಎಕರೆ ಗೋಮಾಳದ ಜಮೀನಿದ್ದು, ಈ ಭಾಗದ ಜಕ್ಕನಹಳ್ಳಿ, ಸೋಮಲಾಪುರ, ತಿಮ್ಲಾಪುರ, ವ್ಯಾಪ್ತಿಯ ಅಲೆಮಾರಿ ಜನಾಂಗ, ಎಸ್ಸಿ/ಎಸ್ಟಿ, ಮೈನಾರಿಟಿ ವರ್ಗ, ಹಿಂದುಳಿದ ವರ್ಗ, ದಲಿತರು, ಮತ್ತು ಜೀವನೋಪಾಯಕ್ಕೆ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ 1962ರಲ್ಲಿ ಕಾಯ್ದೆ 125ರ ಪ್ರಕಾರ ಜಮೀನಿನ ಅಳತೆ ಮಾಡಿ, ಹಿಡುವಳಿಗೆ ಅರ್ಜಿ ಸಲ್ಲಿಸಿ, ಉಳುಮೆ ಮಾಡುತ್ತಿರುವ ರೈತರಿಗೆ ಸಕ್ರಮಗೊಳಿಸಿ ಕೊಡಬೇಕೆಂಬ ಆದೇಶವಿದೆ. 1962, 1968 ಹಾಗೂ 1972ರಿಂದಲೇ ಸರ್ಕಾರಕ್ಕೆ ಅರ್ಜಿ ಹಾಕಿರುವ ರೈತರು ಗೋಮಾಳದ ಜಮೀನನ್ನು ಸಕ್ರಮಗೊಳಿಸಲು ಆಗ್ರಹಿಸಿದರೂ ಸರ್ಕಾರ ಕ್ರಮ ವಹಿಸಿಲ್ಲ ಎಂದರು.


ಅರ್ಜಿ ನಮೂನೆ 57ರಲ್ಲಿ ಅರ್ಜಿ ಹಾಕಿಕೊಂಡವರು ಅರ್ಜಿ ನಮೂನೆ 53-54ರ ಪ್ರಕಾರ ಭೂಮಿ ಉಳುಮೆ ಮಾಡಿರಬೇಕು ಎಂದು ಸರ್ಕಾರ ಹೇಳುತ್ತದೆ, ಇದರಲ್ಲಿ ಕೆಲವರು ಉಳುಮೆ ಮಾಡುತ್ತಿದ್ದರೆ, ಇನ್ನು ಕೆಲವರು ಉಳುಮೆಗೆ ಮುಂದಾದ ಕೂಡಲೇ ಸ್ಥಳಕ್ಕೆ ಧಾವಿಸುವ ಅರಣ್ಯ ಇಲಾಖೆ, ಇದು ಜಿಲ್ಲಾಡಳಿತದ ಜಮೀನು, ಅರಣ್ಯ ಇಲಾಖೆ ಸ್ವತ್ತು, ಸಂರಕ್ಷಿತ ಅರಣ್ಯಕ್ಕೆ ಸೇರಿದೆ, ಅಮೃತ ಮಹಲ್ ಕಾವಲಿಗೆ ಸೇರಿದ ಪ್ರದೇಶ ಎಂದು ಹೇಳಿ ಉಳುಮೆ ಮಾಡಲು ಅಡ್ಡಿಪಡಿಸಿ, ಬೆದರಿಸುತ್ತಿರುವುದರಿಂದ ಸರ್ಕಾರದ ಆದೇಶವಿದ್ದರೂ, ಭೂಮಿಯನ್ನು ಸಕ್ರಮಗೊಳಿಸಿಕೊಳ್ಳಲಾಗದೇ ಅನ್ಯಾಯಕ್ಕೊಳಗಾಗಿದ್ದಾರೆ ಎಂದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಪಿ.ಜಗದೀಶ್ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.

18 ವರ್ಷಗಳಿಂದ ಸರ್ಕಾರಿ ಗೋಮಾಳದ ಮೂರು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಲ್ಲಿಯವರೆಗೂ ನಮಗೆ ಸಾಗುವಳಿ ಚೀಟಿ ಕೊಟ್ಟಿಲ್ಲ. ಕೃಷಿ ಬಿಟ್ಟರೆ ಅನ್ಯ ಮಾರ್ಗವಿಲ್ಲ. ಅತಂತ್ರ ಸ್ಥಿತಿಯಲ್ಲಿದ್ದೇವೆ.

| ನಾಗರತ್ನಾ ಚೌಡ್ಲಾಪುರ ರೈತ ಮಹಿಳೆ

1962ರಲ್ಲೇ ಸರ್ಕಾರ 125ರ ಪ್ರಕಾರ ಜಮೀನಿನ ಅಳತೆ ಮಾಡಿ, ಗೋಮಾಳದ ಜಮೀನಿನಲ್ಲಿ ಬಡ ರೈತರಿಗೆ ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸಿದೆ. ಆದರೆ ಈ ಕಾರ್ಯ ಇಲ್ಲಿವರೆಗೂ ಆಗಿಲ್ಲ. ಆದರೆ ಎತ್ತಿನಹೊಳೆ ಹಾದುಹೋಗುವ ಪ್ರದೇಶದಲ್ಲಿ ಮಾತ್ರ ಅಕ್ರಮವನ್ನು ಸಕ್ರಮಗೊಳಿಸಿ, ಯೋಜನೆ ಮುಂದುವರಿಸುವ ಪ್ರಯತ್ನ ನಡೆದಿದೆ.

| ತಿಮ್ಲಾಪುರ ದೇವರಾಜು ಹಸಿರುಸೇನೆ ತಾಲೂಕು ಅಧ್ಯಕ್ಷ

ತಾಲೂಕಿನ ಬಡ ರೈತರಿಗೂ ಸರ್ಕಾರಿ ಆದೇಶದಂತೆ ಸಾಗುವಳಿ ಚೀಟಿ ನೀಡಬೇಕು. ಅಕ್ರಮ, ಸಕ್ರಮ, ಯೋಜನೆ ಬಡವರಿಗೆ ಸಿಗಬೇಕೇ ಹೊರತು, ಉಳ್ಳವರಿಗಲ್ಲ. ರೈತರಿಗೆ ನ್ಯಾಯ ಸಿಗದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು.
| ಕೆ.ಟಿ. ಶಾಂತಕುಮಾರ್ ಕಾಂಗ್ರೆಸ್ ಮುಖಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net