ಸಮಾಜದಲ್ಲಿ ಶೇ.80ರಷ್ಟು ಭ್ರಷ್ಟಾಚಾರಿಗಳೇ ತುಂಬಿದ್ದಾರೆ

VD_Law
Published on

ತುಮಕೂರು: ಸಮಾಜದಲ್ಲಿ ಶೇ. 20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ 80ರಷ್ಟು ಜನ ಭ್ರಷ್ಟಾಚಾರಿಗಳೇ ತುಂಬಿದ್ದಾರೆ ಎಂದು ಉಪಲೋಕಾಯುಕ್ತ ನ್ಯಾ.ಕೆ.ಎನ್​.ಫಣೀಂದ್ರ ಬೇಸರಿಸಿದರು.

ನಗರದ ವಿದ್ಯೋದಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್​ಸಿಸಿ, ಎನ್​ಎಸ್​ಎಸ್​ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಜನ ಪಕ್ಷಪಾತಿಗಳು, ಮೋಸಗಾರರೇ ಸಮಾಜದಲ್ಲಿ ತುಂಬಿ ತುಳುಕುತಿದ್ದಾರೆ.ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮ ದೇಶಕ್ಕೆ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಮುರಿದು ಬೀಳಲಿದೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ ಮತ್ತು ನಂತರದಲ್ಲಿ ಈ ದೇಶವನ್ನು ಕಟ್ಟಿದವರು ವಕೀಲರುಗಳು. ಗಾಂಧಿ, ನೆಹರು, ಸರದಾರ್​ ವಲ್ಲಭಾಯಿ ಪಟೇಲ್​ ಇವರುಗಳು ದೇಶದ ಆಗು, ಹೋಗುಗಳನ್ನು ಅರ್ಥ ಮಾಡಿಕೊಂಡು,ಎಲ್ಲರನ್ನು ಒಳಗೊಂಡ ಸ್ವಾತಂತ್ರ ನಂತರದ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ಇಂದಿಗೂ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ವಕೀಲರೇ ಆಗಿದ್ದಾರೆ. ಶೇ.20ರಷ್ಟು ಪ್ರಾಮಾಣಿಕರು, ಶೇ.80ರಷ್ಟು ಜನರ ಮನಸ್ಸನ್ನು ಪರಿವರ್ತಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಕಾನೂನು ಪದವಿ ಓದಿದವರು ವಕೀಲರಾಗಲೇಬೇಕು ಎಂದೇನಿಲ್ಲ. ನೀವು ಯಾವುದೇ ವೃತ್ತಿ ಕೈಗೊಳ್ಳಿ, ಅದರಲ್ಲಿ ಪ್ರಾಮಾಣಿಕತೆ, ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ನೀವು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ.ಜೀವನದ ಪ್ರತಿ ಹಂತದಲ್ಲಿಯೂ ಸಮಾಜ ನಮಗೆ ಪಾಠ ಕಲಿಸುತ್ತದೆ. ಒಳ್ಳೆಯದನ್ನು ನಮ್ಮೊಳಗೆ ತೆಗೆದುಕೊಂಡು ಮುನ್ನಡೆದಾಗ ಮಾತ್ರ ಎಲ್ಲರಿಂದಲು ಮಾನ್ಯತೆಗೆ ಒಳಗಾಗಲು ಸಾಧ್ಯ.ವಕೀಲರು ಮೊದಲು ಎಲ್ಲವನ್ನು ಗ್ರಹಿಸುವ ಮತ್ತು ಅದನ್ನು ಅರ್ಥೈಸಿ ಕೊಳ್ಳುವುದನ್ನು ಕಲಿಯಬೇಕು.ಆಗ ಮಾತ್ರ ಸಮಾಜವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.

ಜಾತಿ,ಧರ್ಮ,ಲಿಂಗ, ವರ್ಣ, ವರ್ಗ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ, ನಾವು ಬೆಳೆಯುವುದರ ಜತೆಗೆ, ಇತರರು ಬೆಳೆಯಲು ಸಾಧ್ಯವಾಗುತ್ತದೆ. ಜಾತಿ, ಪೂಜೆ, ಪುನಸ್ಕಾರ ಇವೆಲ್ಲರೂ ನಮ್ಮ ಮನೆಯೊಳಗೆ ಇರಬೇಕೆ ಹೊರತು, ಸಮಾಜದ ನಡುವೆ ಅಲ್ಲ.ಶಾಲಾ ಶಿಕ್ಷಕಿಯಾಗಿದ್ದ ನಮ್ಮ ತಾಯಿ ನನಗೆ ಶಾಲಾ ದಿನಗಳಲ್ಲಿ ಜಾತಿ ಭೇಧ ಮಾಡದಂತೆ ಬುದ್ದಿವಾದ ಹೇಳಿದ್ದರು,ಇದುವರೆಗೂ ಅದನ್ನು ಅನುಸರಿಸಿಕೊಂಡು ಬಂದಿದ್ದೇನೆ ಎಂದು ನ್ಯಾ.ಕೆ.ಎನ್​.ಫಣೀಂದ್ರ ತಿಳಿಸಿದರು.

ಭ್ರಷ್ಟಾಚಾರ ನಿಮೂರ್ಲನೆಗೆ ಕರ್ನಾಟಕ ಲೋಕಾಯುಕ್ತದಂತಹ ಸಂಸ್ಥೆ ಇಡೀ ವಿಶ್ವದಲ್ಲಿಯೇ ಮತ್ತೊಂದು ಇಲ್ಲ.ಹಾಗಾಗಿಯೇ ಕರ್ನಾಟಕದ ಬಗ್ಗೆ ಜನರಿಗೆ ನಂಬಿಕೆ ಹೆಚ್ಚು.ಲೋಕಾಯುಕ್ತ ಎಸ್ಪಿಯಾಗಿ ಕೆಲಸ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ.ಪೊಲೀಸರು ಮತ್ತು ವಕೀಲರು ಒಂದೇ ದೊಣಿಯ ಪಯಣಿಗರು,ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತೇವೆ.ಇಬ್ಬರು ಕೂಡಿದರೆ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಹೇಳಿದರು.

ವಿದ್ಯೋದಯ ಪೌಂಢೇಷನ್​ನ ಅಧ್ಯಕ್ಷ, ನಿವೃತ್ತ ನ್ಯಾ.ಎಚ್​.ಎಸ್​.ಕೆಂಪಣ್ಣ, ವಿದ್ಯೋದಯ ಪ್ರತಿಷ್ಠಾನದ ಮ್ಯಾನೇಜಿಂಗ್​ ಟ್ರಸ್ಟಿ ಎಚ್​,ಎಸ್​.ರಾಜು, ವಿದ್ಯೋದಯ ಶಿಒಕ್ಷಣ ಸಂಸ್ಥೆಯ ಸಿಇಒ ಪ್ರೊ,ಕೆ.ಚಂದ್ರಣ್ಣ, ವಿದ್ಯೋದ್ಯಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮ ಸೈಯದಿ ಮತ್ತಿತರರು ಉಪಸ್ಥಿತರಿದ್ದರು.

ಮನುಷ್ಯನ ಮಾನ, ಪ್ರಾಣ, ಆಸ್ತಿ ರಕ್ಷಣೆಯೇ ಲೋಕಾಯುಕ್ತ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ. ಕಾರ್ಯಾಂಗ, ಶಾಸಕಾಂಗಗಳಲ್ಲಿ ಕರ್ತವ್ಯ ಲೋಪ ಎಸಗಿ, ಸರ್ಕಾರಗಳ ಉದ್ದೇಶಗಳಿಗೆ ವಿರುದ್ಧವಾಗಿ ನಡೆದುಕೊಂಡಾಗ ಲೋಕಾಯುಕ್ತದ ಅಡಿಯಲ್ಲಿ ನ್ಯಾಯ ಪಡೆಯಬಹುದಾಗಿದೆ. ಪ್ರಾಮಾಣಿಕರಾಗಿ ಇರುವುದೇ ತಪ್ಪು ಎನ್ನುವ ಕಾಲದಲ್ಲಿ, ಮನುಷ್ಯನ ಘನತೆ, ಗೌರವದ ಬದುಕಿಗೆ ಪ್ರತಿಯೊಬ್ಬರು ಲೋಕಾಯುಕ್ತರಾಗಬೇಕಾಗುತ್ತದೆ. ನ್ಯಾ.ಕೆ.ಎನ್​.ಣೀಂದ್ರ ಉಪಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net